ADVERTISEMENT

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 2:26 IST
Last Updated 28 ಜನವರಿ 2021, 2:26 IST
ಡಾ.ಅನಿಲ್ ಎಸ್. ರೆಡ್ಡಿ
ಡಾ.ಅನಿಲ್ ಎಸ್. ರೆಡ್ಡಿ   

ಹೊಸಕೋಟೆ: ರಾಜ್ಯದಲ್ಲಿ ನಡೆಯಬೇಕಿದ್ದ ಪ್ರಥಮದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಪರೀಕ್ಷೆಗೂ ಮುಂಚೆಯೇ ಸೋರಿಕೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಭಾರತೀಯ ಸೇವಾ ಸಮಿತಿಯ ವಿದ್ಯಾರ್ಥಿ ಘಟಕದ ರಾಜ್ಯ ಅಧ್ಯಕ್ಷ ಡಾ.ಅನಿಲ್ ಎಸ್. ರೆಡ್ಡಿ ಆಗ್ರಹಿಸಿದರು.

‌ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಇಂತಹ ಅಕ್ರಮ ಮತ್ತು ಭ್ರಷ್ಟಾಚಾರಗಳು ಕೆಪಿಎಸ್‌ಸಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೂ ಇದಕ್ಕೆ ಕಡಿವಾಣ ಹಾಕುವ ಯಾವುದೇ ಪ್ರಯತ್ನ ನಡೆದಿಲ್ಲ. ಕೆಪಿಎಸ್‌ಸಿ ವಿರುದ್ಧ ಹೈಕೋರ್ಟ್ ಕೂಡ ಕೆಂಡಕಾರಿದೆ. ಪದೇ ಪದೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವುದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೋಬಲ ಕುಗ್ಗಿ ಕೆಪಿಎಸ್‌ಸಿ ಮೇಲಿರುವ ಭರವಸೆಯನ್ನು ಕಳೆದುಕೊಳ್ಳುವಂತಾಗಿದೆ ಎಂದು ದೂರಿದರು.

ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಪ್ರಶ್ನೆಪತ್ರಿಕೆ ಎಲ್ಲಿಂದ ಬಂತು, ಯಾರು ತಂದುಕೊಟ್ಟಿದ್ದಾರೆ ಮತ್ತು ಈ ಜಾಲದ ಹಿಂದೆ ಅಡಗಿರುವ ಕಾಣದ ಕೈಗಳ ಬಗ್ಗೆ ಉನ್ನತಮಟ್ಟದಲ್ಲಿ ತನಿಖೆ ನಡೆಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ಅವ್ಯವಹಾರಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸಂಸ್ಥಪನಾ ರಾಜ್ಯ ಅಧ್ಯಕ್ಷ ಡಾ.ರಾಮಚಂದ್ರಪ್ಪ, ಪದಾಧಿಕಾರಿಗಳಾದ ನಾರಾಯಣಪ್ಪಸ್ವಾಮಿ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.