ADVERTISEMENT

ನೋಂದಣಿ ಸೇವಾ ಕೇಂದ್ರ ತೆರೆಯಲು ಒತ್ತಾಯ

‘ಆಧಾರ್’ ಕಾರ್ಡ್‌ ತಿದ್ದುಪಡಿಗಾಗಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 14:08 IST
Last Updated 7 ಫೆಬ್ರುವರಿ 2019, 14:08 IST
ವಿಜಯಪುರದ ನಾಡಕಚೇರಿ 
ವಿಜಯಪುರದ ನಾಡಕಚೇರಿ    

ವಿಜಯಪುರ: ‘ಆಧಾರ್‌’ ಕಾರ್ಡ್ ನೋಂದಣಿ, ತಿದ್ದುಪಡಿ, ಸ್ಥಳ ಬದಲಾವಣೆ ಸೇರಿದಂತೆ ವಿವಿಧ ಮಾರ್ಪಾಡು ಮಾಡಲು ಜನರು ಪರದಾಡುವಂತಾಗಿದೆ ಎಂದು ಸ್ಥಳೀಯ ನಿವಾಸಿ ಜಿ.ರಾಜಗೋಪಾಲ್ ಆರೋಪಿಸಿದರು.

ಫೆ.15ರಿಂದ ಶಾಲೆಗಳಿಗೆ ಆರ್.ಟಿ.ಇ ಅಡಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಮಕ್ಕಳ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್‌ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಕಾರ್ಡ್‌ಗಳಲ್ಲಿ ಹೆಸರು, ಮೊಬೈಲ್ ನಂಬರ್, ಪೋಷಕರ ಹೆಸರು, ವಿಳಾಸದಲ್ಲಿ ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಲು ಜನರು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಯಾಂಕ್‌ಗಳಲ್ಲಿ ದಿನಕ್ಕೆ 20ಮಂದಿಗೆ ಟೋಕನ್ ಕೊಟ್ಟು, ಅವರು ಹೇಳಿದ ದಿನದಲ್ಲಿ ಮಾತ್ರ ತಿದ್ದುಪಡಿ, ನೋಂದಣಿ ಮಾಡಲಾಗುತ್ತಿದೆ. ನಗರದಲ್ಲಿ ಆಧಾರ್ ಸೇವಾ ಕೇಂದ್ರವಿಲ್ಲ. ನಾಡಕಚೇರಿಯಲ್ಲಿ ಇದ್ದರೂ 2 ತಿಂಗಳಿನಿಂದ ಕಂಪ್ಯೂಟರ್ ಕೆಟ್ಟುಹೋಗಿದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ದೂರಿದರು.

ಮುಖಂಡ ಮಂಡಿಬೆಲೆ ದೇವರಾಜಪ್ಪ ಮಾತನಾಡಿ, ಹೋಬಳಿಯಲ್ಲಿ ಸಾಕಷ್ಟು ಜನ ‘ಆಧಾರ್’ ತಿದ್ದುಪಡಿಗೆ ಪರದಾಡುತ್ತಿದ್ದಾರೆ. ನಗರ ಪ್ರದೇಶದಲ್ಲೂ ಇದೇ ತೊಂದರೆ ಇದೆ.ಆಧಾರ್‌ ಲೋಪದೋಷ ಸರಿಪಡಿಸಲು ನೂರಾರು ರೂಪಾಯಿ ಖರ್ಚು ಮಾಡಬೇಕಾಗಿರುವ ಪರಿಸ್ಥಿತಿ ಬಂದಿದೆ. ಪ್ರಾಂಚೈಸಿಗಳಲ್ಲಿ ₹30ರೂಪಾಯಿ ತೆಗೆದುಕೊಂಡು ನೋಂದಣಿ, ತಿದ್ದುಪಡಿ ಮಾಡುತ್ತಿದ್ದರು. ಈಗ ದಿನನಿತ್ಯ ಬ್ಯಾಂಕ್‌ಗೆ ಸುತ್ತಾಡುವಂತಾಗಿದೆ. ಹಾಗಾಗಿ ನಾಡಕಚೇರಿಯಲ್ಲಿ ಸೇವಾ ಕೇಂದ್ರ ತೆರೆಯಲು ಅಗತ್ಯ ಕ್ರಮಕೈಗೊಂಡು, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನಾಡಕಚೇರಿ ಕಂಪ್ಯೂಟರ್ ಅಪರೇಟರ್ ರವಿಕುಮಾರ್ ಮಾತನಾಡಿ, ‘ನಮ್ಮಲ್ಲಿ ಆಧಾರ್ ಕಾರ್ಡ್ ನೋಂದಣಿ ಕೆಲಸ ಮಾಡುತ್ತಿಲ್ಲ. ಎರಡು ತಿಂಗಳಿನಿಂದ ಯಂತ್ರಗಳು ದುರಸ್ತಿಯಾಗಿವೆ. ಹೊಸ ಯಂತ್ರಗಳು ಬಂದ ನಂತರ ಪರಿಸ್ಥಿತಿ ಸರಿಹೋಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT