ADVERTISEMENT

ಒಳ ಮೀಸಲಾತಿ: ಈಡೇರದ ಬೇಡಿಕೆ

ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರು ನೀಡಿದ್ದ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 2:52 IST
Last Updated 6 ಮಾರ್ಚ್ 2021, 2:52 IST
ಹೊಸಕೋಟೆಯಲ್ಲಿ ಮಾದಿಗ ಸಮಾಜದ ಮುಖಂಡರು ಮಾ.8ರಂದು ನಡೆಯಲಿರುವ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಆಟೊ ಪ್ರಚಾರಕ್ಕೆ ಚಾಲನೆ ನೀಡಿದರು
ಹೊಸಕೋಟೆಯಲ್ಲಿ ಮಾದಿಗ ಸಮಾಜದ ಮುಖಂಡರು ಮಾ.8ರಂದು ನಡೆಯಲಿರುವ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಆಟೊ ಪ್ರಚಾರಕ್ಕೆ ಚಾಲನೆ ನೀಡಿದರು   

ಹೊಸಕೋಟೆ: ಸದಾಶಿವ ಆಯೋಗದ ವರದಿ ಜಾರಿಗಾಗಿ ಕಳೆದ 30 ವರ್ಷಗಳಿಂದ ಸತತವಾಗಿ ಮಾದಿಗ ಸಮಾಜದ ಪ್ರಮುಖರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ತಕ್ಷಣವೇ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಾದಿಗ ಮಹಾಸಭಾ ಅಧ್ಯಕ್ಷ ಸುಬ್ಬರಾಜು ಅವರು ಒತ್ತಾಯಿಸಿದರು.

ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.8ರದು ಅನಿದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು. ಸರ್ಕಾರವೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೇಮಿಸಿದ ಆಯೋಗದ ವರದಿ ಅನುಷ್ಠಾನಗೊಳಿಸಲು ಸರ್ಕಾರವೇ ಹಿಂದೇಟು ಹಾಕುತ್ತಿರುವುದು ಸರಿ ಅಲ್ಲ. ಕಳೆದ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ನೀಡಿದ ಆಶ್ವಾಸನೆಯಂತೆ ‌ವರದಿ ಜಾರಿಗೆ ತರಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಳೆದ ಹಲವು ದಿನಗಳಿಂದ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಮಾದಿಗ ಚೈತನ್ಯ ರಥಯಾತ್ರೆ ಮೂಲಕ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದು ಮಾದಿಗ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ADVERTISEMENT

ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್‌, ದೇಶದಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ದು ಅದರಲ್ಲಿ ಮಾದಿಗ ಮತ್ತು ಸಂಬಂಧಿತ 47 ಜಾತಿ ಶೇಕಡ 51ರಷ್ಟು ಇದ್ದರೂ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಇದಕ್ಕಾಗಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸಿ 12 ವರ್ಷವಾದರೂ ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರು.

ಸಮಾಜದ ಮುಖಂಡರಾದ ರಮೇಶ್, ಎಸ್.ನಾರಾಯಣ ಸ್ವಾಮಿ, ಶಿವಾನಂದ್, ಗಂಗಬೈರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.