ADVERTISEMENT

ಹೊಸಕೋಟೆ | ಒಳ ಮೀಸಲಾತಿ ವರದಿಯಲ್ಲಿ ಲೋಪ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 3:10 IST
Last Updated 15 ಆಗಸ್ಟ್ 2025, 3:10 IST
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಅವರ ಭಾವಚಿತ್ರ
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಅವರ ಭಾವಚಿತ್ರ   

ಹೊಸಕೋಟೆ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಯೋಗದ ಒಳ ಮೀಸಲಾತಿ ವರದಿಯಲ್ಲಿ ಹಲವು ಲೋಪಗಳಿವೆ ಎಂದು ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಆರೋಪಿಸಿದ್ದು, ಲೋಪವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಒಳ ಮೀಸಲಾತಿ ವರದಿಯ ಲೋಪದೋಷ ಸರಿಪಡಿಸದಿದ್ದರೆ ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದರು.

ಬಲಗೈ ಸಮುದಾಯಗಳೆಂದು 32 ಜಾತಿ ಗುರುತಿಸಲಾಗಿದೆ. ಬಲಗೈನಲ್ಲಿ ಹೊಲಯ, ಛಲವಾದಿ, ಮಹಾರಾಷ್ಟ್ರ ಗಡಿಯ ಮಹರ್, ಆಂಧ್ರ ಮತ್ತು ತಮಿಳು ಮೂಲದ ಮಾಲಾ, ಪರಯ್ಯ ಎಂಬ ಜಾತಿಗಳು ಸಹ ಸಮಾನರ್ಥಕವಾಗಿ ಗುರುತಿಸಲ್ಪಟ್ಟಿವೆ.

ADVERTISEMENT

2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ 1.50 ಕೋಟಿ ಇತ್ತು. ಆದರೆ ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯ ಯೋಜಿತ ಅಂದಾಜಿನ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ1,38,83,768 ಎಂದು ಗುರುತಿಸಲಾಗಿದೆ. ಅಂದರೆ 2011ರ ಜನಗಣತಿಗೂ 2024ರ ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯ ಅಂದಾಜಿಗೆ 14 ವರ್ಷದ ಅಂತರದಲ್ಲಿ ಕೇವಲ 34,879 ಜನಸಂಖ್ಯೆ ಹೆಚ್ಚಳ ಎಂದರೆ ನಂಬಲು ಅಸಾಧ್ಯ. ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕಿದೆ ಎಂದು ಹೇಳಿದರು.

ಉಪ ವರ್ಗೀಕರಣ ಮಾಡುವ ಪ್ರಕ್ರಿಯೆ ತಡೆಹಿಡಿಯಲು ಕೊರಲಾಗಿದೆ. ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳನ್ನು ಕೈ ಬಿಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಲಾಗಿದೆ. ಇಲ್ಲವಾದರೆ ಬಲಗೈ ಸಮುದಾಯ ಉಗ್ರ ಹೋರಾಟ ಮಾಡದೆ ಬೇರೆ ಮಾರ್ಗವಿಲ್ಲ ಎಂದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಸ್ ನಾರಾಯಣಸ್ವಾಮಿ, ಸಂಘಟನಾ ಸಂಚಾಲಕ ಅನಿಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.