ADVERTISEMENT

ಜಾನಪದ ಸಂಸ್ಕೃತಿ ಪರಿಚಯಿಸಿ: ಉಪ ಮುಖ್ಯಮಂತ್ರಿ ಸಿ.ಅಶ್ವತ್ಥ್ ನಾರಾಯಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 14:20 IST
Last Updated 4 ಮಾರ್ಚ್ 2020, 14:20 IST
ವಾರ್ಷಿಕೋತ್ಸವದಲ್ಲಿ ನವದುರ್ಗೆಯರ ವೇಷ ಧರಿಸಿದ್ದ ವಿದ್ಯಾರ್ಥಿನಿಯರು
ವಾರ್ಷಿಕೋತ್ಸವದಲ್ಲಿ ನವದುರ್ಗೆಯರ ವೇಷ ಧರಿಸಿದ್ದ ವಿದ್ಯಾರ್ಥಿನಿಯರು   

ದೇವನಹಳ್ಳಿ: ಜಾನಪದ ಸಂಸ್ಕೃತಿಯ ಮಹತ್ವವನ್ನುಶಾಲಾ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ‌ಉಪ ಮುಖ್ಯಮಂತ್ರಿ ಸಿ.ಅಶ್ವತ್ಥ ನಾರಾಯಣ ಹೇಳಿದರು.

ಇಲ್ಲಿನ ವಾಣಿ ವಿದ್ಯಾಕೇಂದ್ರ ಶಾಲೆ ಆವರಣದಲ್ಲಿ ನಡೆದ 37ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಪಾರಂಪರಿಕ ಸಂಸ್ಕೃತಿಗೆ ಪೆಟ್ಟು ಬೀಳುತ್ತಿದೆ. ವಿದೇಶಿಗರು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡು ಅನುಸರಿಸುತ್ತಿದ್ದಾರೆ. ಆದರೆ, ನಮ್ಮ ಮಕ್ಕಳು ಇದರಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮುಖಂಡ ಎಸ್.ಲಕ್ಷ್ಮಿನಾರಾಯಣ ಮಾತನಾಡಿ, ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಬರಿ ಮೊಬೈಲ್‌ನಲ್ಲಿಯೇಮುಳುಗಿರುತ್ತಾರೆ. ಪೋಷಕರು ಇದಕ್ಕೆ ಕಡಿವಾಣ ಹಾಕದಿದ್ದರೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ಕಾಳಜಿ ವಹಿಸಬೇಕು. ಅವರಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಬೇಕು ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತಿ ಮುಖ್ಯ. ಪಠ್ಯ ವಿಷಯಗಳ ಕುರಿತು ಅತಿಯಾದ ಒತ್ತಡ ಹೇರಬಾರದು. ಹಾಗೆಯೇ, ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇಂದಿನ ಕಾಲದಲ್ಲಿ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಅವಶ್ಯಕ. ಸಾಮಾನ್ಯ ಜ್ಞಾನ ಬೆಳೆಸಬೇಕು. ಪ್ರಚಲಿತ ವಿದ್ಯಾಮಾನಗಳ ಕುರಿತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಕಾಂತರಾಜ್, ಕೆ‌ಪಿಸಿಸಿ ರಾಜ್ಯ ಹಿಂದುಳಿದ ವರ್ಗ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್, ಪುರಸಭೆ ಸದಸ್ಯರಾದ ರವೀಂದ್ರ, ಎನ್.ರಘು, ಎನ್.ನಾರಾಯಣಸ್ವಾಮಿ, ಪುಷ್ಪಲತಾ, ಮುಖಂಡರಾದ ಆರ್.ನಾರಾಯಣಸ್ವಾಮಿ, ವಿ.ಗೋಪಾಲಕೃಷ್ಣ, ಭೈರೇಗೌಡ, ಆರ್.ವಿಜಯಕುಮಾರ್, ಮುಖ್ಯ ಶಿಕ್ಷಕ ಎಂ.ರಾಮಾಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.