ADVERTISEMENT

ಡಿಸೆಂಬರ್‌ಗೆ ಮಾನವ ರೂಪದ ರೋಬೊ ಗಗನಯಾನ: ಇಸ್ರೊ ಅಧ್ಯಕ್ಷ ಡಾ.ವಿ. ನಾರಾಯಣ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 2:05 IST
Last Updated 20 ಸೆಪ್ಟೆಂಬರ್ 2025, 2:05 IST
ಆನೇಕಲ್‌ನ ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್ ಮಾತನಾಡಿದರು
ಆನೇಕಲ್‌ನ ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್ ಮಾತನಾಡಿದರು   

ಆನೇಕಲ್: ‘ಇಸ್ರೊ ಮಾನವ ಸಹಿತ ಗಗನಯಾನದ ಸಿದ್ಧತೆ ಶೇ 85ರಷ್ಟು ಸಿದ್ಧತೆ ಪೂರ್ಣಗೊಂಡಿದೆ. ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ವಾಪಸ್‌ ಕರೆತರುವುದು ನಮ್ಮ ಗುರಿಯಾಗಿದೆ. ವರ್ಷಾಂತ್ಯಕ್ಕೆ ಎರಡು ಮಾನವ ರಹಿತ ಗಗನಯಾನ ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ. ಡಿಸೆಂಬರ್‌ನಲ್ಲಿ ಅಪ್‌ ಹುಮಾನೋಯ್ಡ್‌( ಮಾನವ ರೂಪದ ರೋಬೊ) ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಡಾ.ವಿ.ನಾರಾಯಣ್‌ ತಿಳಿಸಿದರು.

ಪಟ್ಟಣಕ್ಕೆ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೈಡ್ರೋಜನ್‌ ಇಂಧನ ತಂತ್ರಜ್ಞಾನ ಕುರಿತು ರಾಷ್ಟ್ರೀಯ ಕಾರ್ಯಾಗಾರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 2027ರ ಮೊದಲ ತ್ರೈಮಾಸಿಕದೊಳಗೆ ಮಾನವ ಸಹಿತ ಯಾನ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಇದರ ದಿನಾಂಕವನ್ನು ಪ್ರಧಾನಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

‘ಮಾನವ ಸಹಿತ ಗಗನಯಾನ ಯಶಸ್ಸಿನ ಮೇಲೆ ಶೇ100ರಷ್ಟು ವಿಶ್ವಾಸ ಹೊಂದಿದ್ದೇವೆ. ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಗಗನಯಾನಕ್ಕೆ ಅಗತ್ಯ ಇರುವ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಅನುಭವ ಮತ್ತು ಪರಿಣತಿ ಗಗನಯಾನ ಕಾರ್ಯಕ್ರಮಕ್ಕೆ ಉಪಯೋಗ ಆಗಲಿದೆ ಎಂದರು.

ADVERTISEMENT

‘ದೇಶದ ಕಟ್ಟ ಕಡೆ ವ್ಯಕ್ತಿಗೂ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನ ತಲುಪಿಸುವ ಗುರಿ ಹೊಂದಿದ್ದೇವೆ. ಸಂವಹನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಇಸ್ರೊ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಟೆಲಿಕಮ್ಯೂನಿಕೇಷನ್‌, ರೈಲ್ವೆ ಮಾನಿಟರಿಂಗ್‌, ಟೆಲಿ ಮೆಡಿಸಿನ್‌ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಉಪಯುಕ್ತವಾಗಲಿದೆ’ ಎಂದರು.

ಇಂಧನ ಬೇಡಿಕೆ ತಗ್ಗಿಸಲು ಹೈಡ್ರೋಜನ್‌ ಬಳಕೆ

ಹೆಚ್ಚುತ್ತಿರುವ ಇಂಧನ ಬೇಡಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ತಗ್ಗಿಸುವ ಸವಾಲು ಜಾಗತಿಕ ಮಟ್ಟದಲ್ಲಿ ಎದುರಿಸಲಾಗುತ್ತಿದೆ. ಹೈಡ್ರೋಜನ್‌ ಬಳಕೆಯಿಂದ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿಮೆ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್‌ ಹೇಳಿದರು.

ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೈಡ್ರೋಜನ್‌ ಇಂಧನ ತಂತ್ರಜ್ಞಾನ ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭಾರತದ ಬಾಹ್ಯಾಕಾಶ ಮಿಷನ್‌ ಸಾರಿಗೆ ಮತ್ತು ಶುದ್ಧ ಇಂಧನ ವಿಭಾಗದಲ್ಲಿ ಹೈಡ್ರೋಜನ್‌ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿದೆ. ಶುದ್ಧ ಪರಿಸರ ಹೊಂದಲು ಪ್ರಮುಖ ಪಾತ್ರ ವಹಿಸುತ್ತದೆ. 

ಈ ಇಂಧನವು ಶುದ್ಧ ಮತ್ತು ಹಸಿರು ಇಂಧನವಾಗಿದ್ದು ಭವಿಷ್ಯದ ಭರವಸೆಯಾಗಿದೆ. ಇಸ್ರೋ ಹಲವು ಯಶಸ್ಸುಗಳಲ್ಲಿ ಹೈಡ್ರೋಜನ್‌ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು. 2010-11ರಲ್ಲಿ ಟಾಟಾ ಮೋಟಾರ್ಸ್‌ ಸಹಯೋಗದಲ್ಲಿ ಇಸ್ರೋ ಹೈಡ್ರೋಜನ್‌ ಇಂಧನ ಬಳಸುವ ಬಸ್‌ ನಿರ್ಮಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. 2025ರ ಜೂನ್‌ನಲ್ಲಿ ಐದು ಹೈಡ್ರೋಜನ್‌ ಬಸ್‌ಗಳು ವಾಣಿಜ್ಯ ಸೇವೆ ನೀಡುತ್ತಿವೆ. ಬಿಎಚ್‌ಇಎಲ್‌ ಮತ್ತು ಎನ್‌ಟಿಪಿಸಿ ಹೈಡ್ರೋಜನ್‌ ಗ್ಯಾಸ್‌ ಟರ್ಬೈನ್‌ ಎಂಜಿನ್‌ ನಿರ್ಮಿಸುತ್ತಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.