
ಆನೇಕಲ್: ‘ಇಸ್ರೋ ಮಾನವ ಸಹಿತ ಗಗನಯಾನದ ಸಿದ್ಧತೆ ಶೆ 85 ರಷ್ಟು ಸಿದ್ಧತೆ ಪೂರ್ಣಗೊಂಡಿದ್ದು, ಗಗನಯಾನಿಗಳನ್ನು ಬಾಹ್ಯಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ವಾಪಸ್ ಕರೆತರುವುದು ನಮ್ಮ ಗುರಿಯಾಗಿದೆ. ವರ್ಷಾಂತ್ಯಕ್ಕೆ ಎರಡು ಮಾನವ ರಹಿತ ಗಗನಯಾನ ಕೈಗೊಳ್ಳುವ ಯೋಜನೆ ರೂಪಿಸಲಾಗಿದ್ದು, ಡಿಸೆಂಬರ್‌ನಲ್ಲಿ ಅಪ್ ಹುಮಾನೋಯ್ಡ್( ಮಾನವ ರೂಪದ ರೋಬೊ) ಅನ್ನು ಬಾಹ್ಯಕಾಶಕ್ಕೆ ಕಳುಹಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣ್ ತಿಳಿಸಿದರು.
ಪಟ್ಟಣಕ್ಕೆ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೈಡ್ರೋಜನ್ ಇಂಧನ ತಂತ್ರಜ್ಞಾನ ಕುರಿತು ರಾಷ್ಟ್ರೀಯ ಕಾರ್ಯಾಗಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 2027ರ ಮೊದಲ ತ್ರೈಮಾಸಿಕದೊಳಗೆ ಮಾನವ ಸಹಿತ ಯಾನ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಇದರ ದಿನಾಂಕವನ್ನು ಪ್ರಧಾನಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
‘ಮಾನವಸಹಿತ ಗಗನಯಾನ ಯಶಸ್ಸಿನ ಮೇಲೆ ಶೇ 100ರಷ್ಟು ವಿಶ್ವಾಸ ಹೊಂದಿದಿದ್ದೇವೆ. ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಗಗನಯಾನಕ್ಕೆ ಅಗತ್ಯ ಇರುವ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಅನುಭವ ಮತ್ತು ಪರಿಣಿತಿ ನಮ್ಮ ಗಗನಯಾನ ಕಾರ್ಯಕ್ರಮಕ್ಕೆ ಉಪಯೋಗ ಆಗುತ್ತಿದೆ ಎಂದು ತಿಳಿಸಿದರು.
‘ಭಾರತದ ಕಟ್ಟ ಕಡೆಯ ವ್ಯಕ್ತಿಗೂ ಬಾಹ್ಯಾಕಾಶ ಮತ್ತು ಅತ್ಯಾಧುನಿಕ ಬಾಹ್ಯಕಾಶ ತಂತ್ರಜ್ಞಾನ ತಲುಪಿಸುವ ಗುರಿ ಹೊಂದಿದ್ದೇವೆ. ಸಂವಹನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಇಸ್ರೋ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಟೆಲಿಕಮ್ಯೂನಿಕೇಷನ್, ರೈಲ್ವೇ ಮಾನಿಟರಿಂಗ್, ಟೆಲಿ ಮೆಡಿಸಿನ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಉಪಯುಕ್ತವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.