ADVERTISEMENT

ಜೆಜೆಎಂ ಕಾಮಗಾರಿ: ₹234 ಕೋಟಿ ವೆಚ್ಚದ ಯೋಜನೆಯಲ್ಲಿ ಖರ್ಚಾಗಿದ್ದು ₹47 ಕೋಟಿಯಷ್ಟೇ!

ಪ್ರಜಾವಾಣಿ ವಿಶೇಷ
Published 17 ಜನವರಿ 2024, 5:34 IST
Last Updated 17 ಜನವರಿ 2024, 5:34 IST
ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ
ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ   

ಹೊಸಕೋಟೆ: ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿಯು ಶೇ 60ರಷ್ಟು ಬಾಕಿ ಉಳಿದಿದೆ.

ಎಂಟು ಗ್ರಾಮಗಳಲ್ಲಿ ಮಾತ್ರ ಜೆಜೆಎಂ ಪೂರ್ಣ: ತಾಲ್ಲೂಕಿನಾದ್ಯಂತ ಒಟ್ಟು 254 ಗ್ರಾಮಗಳಿದ್ದು, ಅವುಗಳಲ್ಲಿ ಈವರೆಗೂ 185 ಗ್ರಾಮಗಳಲ್ಲಿ ಮಾತ್ರ ಯೋಜನೆ ಅನುಷ್ಠಾನ ನಡೆದಿವೆ. ಅದರಲ್ಲಿ ಎಂಟು ಗ್ರಾಮಗಳಲ್ಲಿ ಮಾತ್ರ ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಉಳಿದಂತೆ 177 ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. 69 ಗ್ರಾಮಗಳಲ್ಲಿ ಯೋಜನೆಯ ಯಾವುದೇ ಕೆಲಸ ಪ್ರಾರಂಭವಾಗಿಲ್ಲ. 97 ಗ್ರಾಮಗಳಲ್ಲಿ ಶೇ 50ರಷ್ಟು, 56 ಗ್ರಾಮಗಳಲ್ಲಿ ಶೇ 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 24 ಗ್ರಾಮಗಳಲ್ಲಿ ಕಾಮಗಾರಿ ಮುಕ್ತಾಯದ ಹಂತವನ್ನು ತಲುಪಿದೆ.

254 ಗ್ರಾಮಗಳ ಜೆಜೆಎಂ ಯೋಜನೆಗಾಗಿ ಒಟ್ಟು ₹234 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೇವಲ ₹47 ಕೋಟಿ ಮಾತ್ರ ಖರ್ಚಾಗಿದೆ.  

ADVERTISEMENT

ಜೆಜೆಎಂ ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳು: ದೊಡ್ಡನಲ್ಲೂರ ಹಳ್ಳಿ, ಯಶವಂತಪುರ, ಓರೋಹಳ್ಳಿ, ಒಳಗೆರೆಪುರ, ದೊಡ್ಡನಲ್ಲಾಲ, ಅಪ್ಪಸಂದ್ರ, ಬಚ್ಚೇಗೌಡ ಕಾಲೊನಿ, ತಿಮ್ಮಪ್ಪನಹಳ್ಳಿ ಎಂಟು ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. 56 ಗ್ರಾಮಗಳಲ್ಲಿ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಪ್ರಗತಿಯಲ್ಲಿರುವ ಇತರೆ ಕಾರ್ಯಗಳು: ಓವರ್ ಹೆಡ್ ಟ್ಯಾಂಕ್‌, ಟ್ಯಾಂಕಿಗಳ ದುರಸ್ತಿ, ಕೊಳವೆ ಬಾವಿಗಳ ಕಾಮಗಾರಿ ನಡೆಯುತ್ತಿದೆ.  ತಾಲ್ಲೂಕಿನಲ್ಲಿ ಒಟ್ಟು 154 ಓವರ್ ಹೆಡ್ ಟ್ಯಾಂಕ್‌ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಅದರಲ್ಲಿ 29 ಟ್ಯಾಂಕ್‌ಗಳ ನಿರ್ಮಾಣ ಮುಕ್ತಾಯವಾಗಿದ್ದರೆ, 42 ಟ್ಯಾಂಕ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ಉಳಿದಂತೆ 83 ಟ್ಯಾಂಕ್‌ಗಳ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಬೇಕಿದೆ.

ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಯೋಜನೆ ರೂಪಿಸಿದ್ದು, ಒಟ್ಟು 359 ಕೊಳವೆ ಬಾವಿಗಳನ್ನು ಕೊರೆಯುವ ಪ್ರಸ್ತಾವವಿದೆ. ಅದರಲ್ಲಿ ಈವರೆಗೆ 185 ಕೊಳವೆ ಬಾವಿ ಕೊರೆಸಲಾಗಿದೆ. ಅದರಲ್ಲಿ 156 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದ್ದು, 27 ಕೊಳವೆ ಬಾವಿಗಳು ವಿಫಲವಾಗಿದೆ.

ಹೊಸಕೋಟೆ ತಾಲ್ಲೂಕಿನ ಕಮ್ಮಸಂದ್ರದಲ್ಲಿ ಜೆಜೆಎಂ ಕಾಮಗಾರಿಗಾಗಿ ಹಗೆದಿರುವ ರಸ್ತೆ
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೇ ಅದನ್ನು ಒಂದು ವರ್ಷದ ಕಾಲ ನಿರ್ವಹಿಸಬೇಕಾಗುತ್ತದೆ. ಅಲ್ಲದೆ ಹಲವು ಷರತ್ತುಗಳಿಗೆ ಒಳಪಟ್ಟು ನಾವು ಗುತ್ತಿಗೆದಾರರಿಗೆ ಬಿಲ್ ನೀಡುತ್ತೇವೆ. ಮಾರ್ಚ್ ತಿಂಗಳ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಬೇಕೆಂಬ ಗುರಿ ಇದೆ
-ಮಹದೇವಯ್ಯ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊಸಕೋಟೆ
ಹಗೆದ ರಸ್ತೆಯನ್ನು ನಿರ್ಮಿಸಲು ಫಾರ್ಮಾನು ಹೊರಡಿಸಬೇಕು ಬಹುತೇಕ ಗ್ರಾಮಗಳಲ್ಲಿ ಚೆನ್ನಾಗಿದ್ದ ರಸ್ತೆ ಜೆಜೆಎಂ ಕಾಮಗಾರಿಯಿಂದ ಹಾಳಾಗಿದೆ. ಜತೆಗೆ ಅದನ್ನು ಕಾಟಾಚಾರಕ್ಕೆ ಮುಚ್ಚುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜೆಜೆಎಂಗಾಗಿ ಹಗೆದ ರಸ್ತೆಯನ್ನು ಯಥಾ ಪ್ರಕಾರ ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಗುತ್ತಿಗೆದಾರರರಿಗೆ ಫಾರ್ಮಾನು ಹೊರಡಿಸಬೇಕು. ಇಲ್ಲದಿದ್ದರೆ ಜೆಜೆಎಂ ಕಾರಣದಿಂದ ಮತ್ತೆ ಹಳ್ಳಿಗಳ ರಸ್ತೆಗಳು ಹಾಳಾಗಲಿವೆ.
-ನಾರಾಯಣಸ್ವಾಮಿ, ಮುಗಬಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.