ADVERTISEMENT

ಮೂರೇ ದಿನಕ್ಕೆ ಮುರಿದು ಬಿದ್ದ ಒಗ್ಗಟ್ಟು

ದೊಡ್ಡಬಳ್ಳಾಪುರ: ಜೆಡಿಎಸ್‌ ಮುಖಂಡರ ಭಿನ್ನಮತ ಸ್ಫೋಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:18 IST
Last Updated 2 ಡಿಸೆಂಬರ್ 2022, 4:18 IST
ದೊಡ್ಡಬಳ್ಳಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡ ಹುಸ್ಕೂರು ಆನಂದ್ ಮಾತನಾಡಿದರು
ದೊಡ್ಡಬಳ್ಳಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡ ಹುಸ್ಕೂರು ಆನಂದ್ ಮಾತನಾಡಿದರು   

ದೊಡ್ಡಬಳ್ಳಾಪುರ: ‘ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಮುನೇಗೌಡಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಸೋಲು ಖಚಿತ. ಹಾಗಾಗಿ, ಹೊಸ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು’ ಎಂದು ಜೆಡಿಎಸ್ ಮುಖಂಡ ಹುಸ್ಕೂರು ಆನಂದ್ ಆಗ್ರಹಿಸಿದ್ದು, ಆ ಮೂಲಕ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಎಲ್ಲಾ ಬಣಗಳು ಪ್ರದರ್ಶಿಸಿದ್ದ ಒಗ್ಗಟ್ಟು ಮೂರೇ ದಿನದಲ್ಲಿ ಮುರಿದು ಬಿದ್ದಿದೆ.

ಯಾತ್ರೆಯು ತಾಲ್ಲೂಕಿಗೆ ಆಗಮಿಸಿದ್ದ ಸಮಯದಲ್ಲಿ ಮುನೇಗೌಡ ಅವರ ವರ್ತನೆ ಕುರಿತು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಪಕ್ಷದ ಹೈಕಮಾಂಡ್ ಅವರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಸುವ ಪ್ರಶ್ನೆಯೇ ಇಲ್ಲ‌. ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾದರೆ ಮಾತ್ರ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ತರುತ್ತೇವೆ. ಟಿಕೆಟ್ ಆಕಾಂಕ್ಷಿಗಳಲ್ಲಿ ನಾನು ಹಾಗೂ ಹರೀಶ್‌ಗೌಡ‌ ಸಹ ಇದ್ದೇವೆ’
ಎಂದರು.

ADVERTISEMENT

‘ಜೆಡಿಎಸ್‌ ಮುಖಂಡ ಎಚ್. ಅಪ್ಪಯ್ಯ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಆರೂಢಿ, ಹೊಸಹಳ್ಳಿ ಭಾಗದಲ್ಲಿ ಯಾತ್ರೆ ಸ್ವಾಗತಿಸುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ದೊಡ್ಡಬೆಳವಂಗಲದಲ್ಲಿ ಹರೀಶ್‌ಗೌಡ, ಮಧುರೆ ಹೋಬಳಿಯಲ್ಲಿ ಮುನೇಗೌಡ ಅವರಿಗೆ ಹಂಚಿಕೆ ಮಾಡಲಾಗಿತ್ತು. ಆರೂಢಿಯಲ್ಲಿ ಮುನೇಗೌಡರ ಸೋದರ ರಾಜಗೋಪಾಲ್ ಹಾಗೂ ಅವರ ಬೆಂಬಲಿಗರು ಕಾರ್ಯಕ್ರಮ ಆಯೋಜಿಸದಂತೆ ನನಗೆ ಧಮಕಿ ಹಾಕಿದ್ದಾರೆ. ನಾವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಮುನೇಗೌಡರ ಕುಟುಂಬದ ಹಸ್ತಕ್ಷೇಪ ಹೆಚ್ಚಾಗಿದ್ದು ಶಾಂತಿ ಕದಡಲಿದೆ’ ಎಂದು ದೂರಿದರು.

ರಥಯಾತ್ರೆ ಆಗಮನಕ್ಕೂ ಮುನ್ನ ದೊಡ್ಡಬಳ್ಳಾಪುರ ನಗರದಲ್ಲಿ ಬ್ಯಾನರ್ ಕಟ್ಟಲು ಹೋದ ನಮ್ಮ ಕಡೆಯವರಿಗೆ ಫೋನ್‌ ಮಾಡಿ ಧಮಕಿ ಹಾಕಿದ್ದಾರೆ. ರಾಜಘಟ್ಟದಲ್ಲಿ ಮುನೇಗೌಡರ ಪುತ್ರ ಜೆಡಿಎಸ್ ಕಾರ್ಯಕರ್ತನ ಮೇಲೆ‌ ಹಲ್ಲೆ ಮಾಡಿದ್ದಾರೆ. ಈಗಲೇ ಇಷ್ಟೊಂದು ದರ್ಪ‌ ತೋರಿದರೆ ಅವರು ಶಾಸಕರಾದ ಮೇಲೆ‌ ಕ್ಷೇತ್ರದಲ್ಲಿ ಶಾಂತಿ ಹಾಳು ಮಾಡುವುದರಲ್ಲಿ‌ ಅನುಮಾನವಿಲ್ಲ ಎಂದು
ಟೀಕಿಸಿದರು.

ಮುನೇಗೌಡ ಹಾಗೂ ಅವರ ಸಹೋದರ ರಾಜಗೋಪಾಲ್ ಅವರ ದೌರ್ಜನ್ಯ ಕುರಿತು ಹೊಸಹಳ್ಳಿ ಪೊಲೀಸ್‌ ಠಾಣೆಗೆ ದೂರು ಸಹ ನೀಡಲಾಗಿದೆ. ಯಾತ್ರೆ ಸಂದರ್ಭದಲ್ಲಿ ಗೊಂದಲವಾಗಬಾರದು ಎಂದು ಮೌನಕ್ಕೆ ಶರಣಾಗಿದ್ದೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಪುಟ್ಟಬಸವರಾಜು, ರಾಜಘಟ್ಟ ಶಿವಣ್ಣ, ನಾರಾಯಣಗೌಡ, ಕೆಸ್ತೂರು ಚನ್ನರಾಮಣ್ಣ, ಸಿದ್ದಲಿಂಗಪ್ಪ, ಮುನಿರಾಜು, ಸುಬ್ರಮಣಿ, ನರಸಿಂಹ ರೆಡ್ಡಿ, ನಂದೀಶ್, ಕೇಶವ, ನಾಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.