
ಜಿಗಣಿ (ಆನೇಕಲ್): ತಾಲ್ಲೂಕಿನ ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 3 ಮಾರುತಿ ನಗರದಲ್ಲಿ ಸೋಮವಾರ ₹97ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪುರಸಭೆ ಅಧ್ಯಕ್ಷೆ ಅರುಣಾ ಕುಮಾರಿ ಪ್ರಹ್ಲಾದರೆಡ್ಡಿ ಮತ್ತು ಉಪಾಧ್ಯಕ್ಷೆ ಸವಿತಾ ಎಸ್.ಮುರಳಿ ಉದ್ಘಾಟಿಸಿದರು.
ಮೈಕ್ರೋ ಲ್ಯಾಬ್ ಲಿಮಿಟೆಡ್ ಕಂಪನಿ ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಅನುದಾನದಡಿ ₹30ಲಕ್ಷ ವೆಚ್ಚದಲ್ಲಿ ಮಾರುತಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ, ₹3.5ಲಕ್ಷ ವೆಚ್ಚದಲ್ಲಿ ಎರಡು ಹೈಮಾಸ್ಟ್ ಬೀದಿ ದೀಪಗಳ ಅಳವಡಿಕೆ ಹಾಗೂ ಏರೋನ್ ಯುನಿವರ್ಸಲ್ ಲಿಮಿಟೆಡ್ ವತಿಯಿಂದ ₹7.5 ಲಕ್ಷ ವೆಚ್ಚದಲ್ಲಿ ಮಾರುತಿ ನಗರದ ಮುಖ್ಯ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಪುರಸಭೆ ಉಪಾಧ್ಯಕ್ಷೆ ಸವಿತಾ ಎಸ್.ಮುರಳಿ, ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು ಮತ್ತು ಕೈಗಾರಿಕೆಗಳು ಕೈಜೋಡಿಸಿದಾಗ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಜಿಗಣಿ ಕೈಗಾರಿಕಾ ಪ್ರದೇಶವಾಗಿದ್ದು, ಮಾರುತಿ ನಗರದ ಸುತ್ತಮುತ್ತಲೂ ಹಲವು ಕಂಪನಿಗಳಿವೆ. ಈ ಕಂಪನಿಗಳ ಸಹಕಾರದೊಂದಿಗೆ ಸಾರ್ವಜನಿಕರಿಗೆ ಅಗತ್ಯವಾದ ಸರ್ಕಾರಿ ಶಾಲಾ ಕಟ್ಟಡ, ಬೀದಿ ದೀಪ ಮತ್ತು ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಜಿಗಣಿ ಕೈಗಾರಿಕಾ ಪ್ರದೇಶವಾದ್ದರಿಂದ ಸಾವಿರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಅಗತ್ಯವಾದ ಸೌಲಭ್ಯ ಒದಗಿಸಲು ಪುರಸಭೆ ಆದ್ಯತೆ ನೀಡಿದೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಕಡ್ಡಾಯವಾಗಿ ಪುರಸಭೆ ವಾಹನಗಳಿಗೆ ನೀಡಬೇಕು. ಇದರಿಂದ ಪೌರಕಾರ್ಮಿಕರ ಕೆಲಸಕ್ಕೆ ಅನುಕೂಲವಾಗುತ್ತದೆ ಎಂದರು.
ಜಿಗಣಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಸುಸಜ್ಜಿತ ಆರೋಗ್ಯ ಉಪಕೇಂದ್ರ ಸ್ಥಾಪಿಸುವ ಗುರಿ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.