ADVERTISEMENT

ಸರ್ಕಾರಕ್ಕೆ ಮನವಿ: ಖಾಸಗಿ ಶಿಕ್ಷಕರಿಗೂ ‘ಜ್ಯೋತಿ ಸಂಜೀವಿನಿ’

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 2:46 IST
Last Updated 14 ಮಾರ್ಚ್ 2021, 2:46 IST
ಆನೇಕಲ್‌ನಲ್ಲಿ ತಾಲ್ಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಪೂರ್ವ ಸಂಗಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಉದ್ಘಾಟಿಸಿದರು
ಆನೇಕಲ್‌ನಲ್ಲಿ ತಾಲ್ಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಪೂರ್ವ ಸಂಗಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಉದ್ಘಾಟಿಸಿದರು   

ಆನೇಕಲ್: ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯ ಸರ್ಕಾರ ಜ್ಯೋತಿ ಸಂಜೀವಿನಿ ಯೋಜನೆಯಡಿ ಆರೋಗ್ಯ ಸೌಲಭ್ಯ ನೀಡಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.

ಅವರು ಪಟ್ಟಣದಲ್ಲಿ ತಾಲ್ಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಪೂರ್ವ ಸಂಗಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಶಿಕ್ಷಕರ ಕಲ್ಯಾಣನಿಧಿ ಮತ್ತು ವಿದ್ಯಾರ್ಥಿಗಳ ಕಲ್ಯಾಣ ನಿಧಿಗೆ ಪ್ರತಿವರ್ಷ ವಂತಿಗೆ ಪಡೆಯಲಾಗುತ್ತದೆ.

ADVERTISEMENT

ಈ ನಿಧಿಯಲ್ಲಿ ಅನುದಾನ ಬಳಸಿ ಖಾಸಗಿ ಶಾಲೆಗಳ ಶಿಕ್ಷಕರಿಗೆ ವೈದ್ಯಕೀಯ ನೆರವು ಸೇರಿದಂತೆ ಪ್ಯಾಕೇಜ್‌ ಸೌಲಭ್ಯ ನೀಡಲು ಸದನದಲ್ಲಿ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಗೆ ಮತ್ತು ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ. ಸಾಧ್ಯವಿರುವ ಸೌಲಭ್ಯ ಕಲ್ಪಿಸಿಕೊಡಲು ಎಲ್ಲ ರೀತಿ ಪ್ರಯತ್ನ ಮಾಡಲಾಗುವುದುಎಂದರು.

ಕೊರೊನಾ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಆನ್‌ಲೈನ್‌ ಮೂಲಕ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಕಡೆಗಣಿಸುವುದು ಸಲ್ಲದು. ಖಾಸಗಿ ಶಾಲೆಗಳ ಪರವಾನಗಿ ನವೀಕರಣ ಸಂಬಂಧ ಕಟ್ಟಡ ಸುರಕ್ಷತೆ ಮತ್ತು ಅಗ್ನಿಶಾಮಕ ಸುರಕ್ಷತೆಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಾರಂಭಿಸಿದ ಶಾಲೆಗಳಿಗೆ ನಿಯಮಗಳಲ್ಲಿ ವಿನಾಯಿತಿ ನೀಡುವಂತೆ ಸರ್ಕಾರ ಆದೇಶಿಸಿದೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದರು.

ಖಾಸಗಿ ಶಾಲೆಗಳಿಗೆ ಸಿಆರ್‌ಪಿಗಳು ಅನವಶ್ಯಕವಾಗಿ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸಿಆರ್‌ಪಿ, ಬಿಆರ್‌ಪಿ, ಇಸಿಒಗಳು ಕೆಲಸ ಮಾಡಲಿ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಖಾಸಗಿ ಶಾಲೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಡಿ.ಮುನಿರಾಜು ಮಾತನಾಡಿ, ಸಂಕಷ್ಠದ ಸಂದರ್ಭದಲ್ಲಿ ಖಾಸಗಿ ಶಾಲೆಗಳು ನಡೆಸುವುದೇ ಕಷ್ಟ ಎಂಬ ಸನ್ನಿವೇಶದಲ್ಲಿ ಶಿಕ್ಷಣ ಸಂಸ್ಥೆಗಳಿವೆ. ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಕ್ಯಾಮ್ಸ್‌ನ ಕಾರ್ಯದರ್ಶಿ ಶಶಿಕುಮಾರ್‌ ಅವರು ಸರ್ಕಾರದ ಜತೆಗೆ ಸತತ ಸಂಪರ್ಕ ಸಾಧಿಸಿ ಸ್ಪಂದಿಸಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ ಶ್ರೇಷ್ಠ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುಟ್ಟಣ್ಣ ಮತ್ತು ವಿದ್ಯಾಮಣಿ ಪುಟ್ಟಣ್ಣ ಅವರನ್ನು ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನರಸಿಂಹರಾಜು, ಪುರಸಭಾ ಸದಸ್ಯ ಸುರೇಶ್‌, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಾಜಪ್ಪ, ಒಕ್ಕೂಟದ ಕಾರ್ಯದರ್ಶಿ ಶೇಖರ್, ಉಪಾಧ್ಯಕ್ಷರಾದ ಅಜ್ಜಪ್ಪ, ಟಿ.ಕೆ.ವಿಧಾತ್‌, ಜಂಟಿ ಕಾರ್ಯದರ್ಶಿ ಜ್ಯೋತಿಗೌಡ, ಸಂಘಟನಾ ಕಾರ್ಯದರ್ಶಿ ಎನ್‌.ಸುರೇಶ್, ಖಜಾಂಚಿ ಕಿಶೋರ್‌ ಶರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.