ADVERTISEMENT

ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿ; ಸಚಿವ ಕೆ.ಎಚ್‌.ಮುನಿಯಪ್ಪ

ಅನುದಾನಕ್ಕೆ ಕೊರತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 5:13 IST
Last Updated 8 ಏಪ್ರಿಲ್ 2024, 5:13 IST
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು   

ದೊಡ್ಡಬಳ್ಳಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನಕ್ಕೆ ಕೊರತೆಯಿಲ್ಲ. ನೀರು, ರಸ್ತೆ, ವಸತಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ನೀತಿ ಸಂಹಿತೆ ಕಾರಣದಿಂದಾಗಿ ಕೆಲ ಕಾರ್ಯಗಳು ವಿಳಂಬವಾಗಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ತಾಲ್ಲೂಕಿನ ರಾಜಘಟ್ಟ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳಾಗಿದೆ. ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಾರೆ. ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆ ಗೃಹಲಕ್ಷ್ಮಿ, ಶಕ್ತಿ ಸೇರಿ ಹಲವು ಯೋಜನೆ ರೂಪಿಸಲಾಗಿದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಶ್ರಮಿಸಿದರೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ನಿಶ್ಚಯವಾಗಲಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಚುನಾವಣೆ ಎಂದರೆ ಭಾಷಣ ಮಾಡುವುದಲ್ಲ. ಚುನಾವಣೆಯ ಸೋಲು–ಗೆಲುವು ಕಾರ್ಯಕರ್ತರ ಕೈಯಲ್ಲಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಮೈಕೊಡವಿ ನಿಂತು ಕೆಲಸ ಮಾಬೇಕು. ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ ಪ್ರತಿಯೊಬ್ಬರ ಮನವೊಲಿಸಿ ಮತಗಳಾಗಿ ಬದಲಿಸುವ ಶಕ್ತಿ ಕಾರ್ಯಕರ್ತರಿಗಿದೆ ಎಂದರು.

ಮುಂದಿನ ದಿನಗಳಲ್ಲಿ ಕಾವೇರಿ ನೀರು, ಮೆಟ್ರೋ ತರುವ ಆಶಯ ನಮ್ಮದಾಗಿದೆ. ಹಾಗಾಗಿ ಇದನ್ನು ಸಕಾರಗೋಳಿಸಲು ಕೈ ಬಲಪಡಿಸಿ ಲೋಕಸಭಾ ಚುನಾವಣೆಯಲ್ಲಿ ರಕ್ಷಾರಾಮಯ್ಯ ಪರ ಕೆಲಸ ಮಾಡಬೇಕಿದೆ ಎಂದರು.

ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನ್ಯಾಯ ಪತ್ರ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಎಂಬ 25 ಗ್ಯಾರಂಟಿಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಸಾಮಾಜಿಕವಾಗಿ ಹಿಂದುಳಿದವರ ಪರ ಅಧಿಕಾರ ನಡೆಸುತ್ತಿದೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕರಮಣಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಕೆಲಸಗಳಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಆಗಿರುವ ಕೆಲಸಗಳನ್ನು ಜನತೆ ಪ್ರಶ್ನಿಸಬೇಕಿದೆ. ಎತ್ತಿನಹೊಳೆ ಯೋಜನೆ, ಕೆ.ಸಿ.ವ್ಯಾಲಿ ಅಲ್ಲದೇ ವೃಷಭಾವತಿ ಯೋಜನೆಗಳು ಜಾರಿಯಾಗಿವೆ. ಈ ಬಾರಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ
ಎಂದರು.

ಪ್ರಚಾರ ಸಭೆಯಲ್ಲಿ ಹಿರಿಯ ಮುಖಂಡರಾದ ಸಿ.ಡಿ.ಸತ್ಯನಾರಾಯಣಗೌಡ, ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನಾಥ್, ಕಸಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾಂತರಾಜು, ಕೆ.ಎಂ.ಕೃಷ್ಣಮೂರ್ತಿ, ರೇವತಿ ಅನಂತರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.