
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯ ಸಭಾಂಗಣದಲ್ಲಿ ಕನಕದಾಸ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಸಂಬಂಧ ಪೂರ್ವಭಾವಿ ಸಭೆ ನಡೆಯಿತು
ದೇವನಹಳ್ಳಿ: ನವೆಂಬರ್ 8 ರಂದು ನಡೆಯಲಿರುವ ಕನಕದಾಸ ಜಯಂತಿ ಹಾಗೂ ನವೆಂಬರ್ 11 ರಂದು ನಡೆಯಲಿರುವ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಸೂಚಿಸಿದರು.
ತಾಲ್ಲೂಕಿನ ಬೀರಸಂದ್ರದಲ್ಲಿರುವ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಸಂಬಂಧ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನಕದಾಸ ಅವರ ಜಯಂತಿಯನ್ನು ನವೆಂಬರ್ 8 ರಂದು ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ದೇವನಹಳ್ಳಿ ಟೌನ್ ನಲ್ಲಿರುವ ಕನಕ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ಕನಕದಾಸರ ಭಾವಚಿತ್ರ ರಥಯಾತ್ರೆ ಮೆರವಣಿಗೆ ಹೊರಡಲಿದೆ. ನಂತರ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಒನಕೆ ಓಬವ್ವ ಜಯಂತಿಗೆ ಸ್ಥಳ ನಿಗದಿಪಡಿಸಿ ತಿಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರ ಭಾಷಣ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಲಾವಿದರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಉಪನ್ಯಾಸ ಇರಲಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು, ಹಾಸ್ಟೆಲ್ಲ್‌ಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ ಕನಕದಾಸ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಜಯಂತಿ ಆಚರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಎಂದು ನಿರ್ದೇಶಿಸಿದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು. ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರು, ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.