ADVERTISEMENT

ದೊಡ್ಡಬಳ್ಳಾಪುರ: ಶಾಲೆಯಲ್ಲಿ ‘ಎದೆಯ ಹಣತೆ’ ಸಂವಾದ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 2:03 IST
Last Updated 12 ಜುಲೈ 2025, 2:03 IST
   

ದೊಡ್ಡಬಳ್ಳಾಪುರ: ಇಲ್ಲಿನ ಸರಸ್ವತಿ ಶಾಲೆಯಲ್ಲಿ ಕನ್ನಡ ಬಳಗದ ಉದ್ಘಾಟನೆ ಹಾಗೂ ಲೇಖಕಿ ಬಾನುಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿ ಕುರಿತ ಸಂವಾದ ನಡೆಯಿತು.

ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ 100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಈ ವೇಳೆ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದು, ಕನ್ನಡ ಸಾಹಿತ್ಯದ ಹಿರಿಮೆಯನ್ನು ಪ್ರಚುರಪಡಿಸುವ ಕಾರ್ಯವಾಗಬೇಕಿದೆ. ಕನ್ನಡ ಸಾಹಿತ್ಯಕ್ಕೆ ಮುಕುಟವಿಟ್ಟಂತೆ ಸಮಕಾಲೀನ ಕಾಲಘಟ್ಟದ ಅನನ್ಯ ಕೃತಿಯೊಂದಕ್ಕೆ ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದ್ದು, ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ಬಾನುಮುಷ್ತಾಕ್ ಅವರನ್ನು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಘೋಷಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್‌ ಮಹತ್ವದ ಗೌರವ ನೀಡಿರುವುದು ಅರ್ಥಪೂರ್ಣವಾಗಿದೆ ಎಂದರು.

ADVERTISEMENT

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಆರ್‌.ರವಿಕಿರಣ್‌ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಕಟ್ಟುಪಾಡುಗಳ ನಡುವೆ ಜರ್ಜರಿತವಾಗಿರುವ ಮಹಿಳೆಯರ ಬದುಕಿನ ಬರ್ಬರತೆಯನ್ನು ಬಾನುಮುಷ್ತಾಕ್ ಅವರು ತಮ್ಮ ಹಲವು ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯ ಅಸ್ತಿತ್ವ ಮತ್ತು ಬದುಕು, ಪ್ರೀತಿ ಮತ್ತು ಕಾಠಿಣ್ಯ, ಭಾವನೆ ಮತ್ತು ನಿರ್ದಯತೆ ನಡುವಿನ ಸೇತುವೆಯಾಗಿ ಹೆಣ್ಣಿನ ಬದುಕನ್ನು ನೋಡುವ ಸೃಜನಶೀಲ ಆಲೋಚನೆಯ ಜೊತೆ ಜೊತೆಯಲ್ಲಿ ವ್ಯವಸ್ಥೆಯ ಕುರಿತು ಗಂಭೀರ ಆಕ್ಷೇಪ ಮತ್ತು ಪ್ರತಿಭಟನೆಯ ದನಿಯನ್ನು ಕಾಣಬಹುದು ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಬಿ.ಕೆ.ಸಂಪತ್‌ಕುಮಾರ್‌ ಮಾತನಾಡಿ, ಶಾಲೆಯಲ್ಲಿ ಆರಂಭಿಸಿರುವ ಕನ್ನಡ ಬಳಗದ ಮೂಲಕ ಮುಂದಿನ ದಿನಗಳಲ್ಲಿ ಕನ್ನಡದ ಪ್ರಸಿದ್ಧ ಕೃತಿಗಳ ಬಗ್ಗೆ ಸಂವಾದ ಆಯೋಜಿಸಲಾಗುವುದು. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಕನ್ನಡ ಬಳಗದ ಕಾರ್ಯಕ್ರಮಗಳು ಪೂರಕ ಎಂದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಸುಬ್ರಮಣ್ಯ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುನಿರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ಸಾಹಿತಿ ಶರಣಯ್ಯ ಹಿರೇಮಠ, ಸಿ.ಪಿ.ಎನ್‌‌.ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.