
ಹಕ್ಕೊತ್ತಾಯ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಹಲವು ಬಾರಿ ಅನ್ಯಾಯವಾಗುತ್ತಿದೆ | ಈ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು | ಕೈಗಾರಿಕಾ ಪ್ರದೇಶದಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಸರ್ಕಾರ ಕಾರ್ಯಕ್ರಮವೊಂದನ್ನು ಜಾರಿ ಮಾಡಬೇಕು | ಸರ್ಕಾರಿ ಶಾಲೆಗಳ ಉಳಿವಿಗೆ ಪ್ರಥಮ ಆದ್ಯತೆ ನೀಡಬೇಕು
ಆನೇಕಲ್: ತಾಲ್ಲೂಕಿನ ಅತ್ತಿಬೆಲೆ–ತಮಿಳುನಾಡು ಗಡಿಯಲ್ಲಿ ಭಾನುವಾರ ಕನ್ನಡ ಡಿಂಡಿಮ ಮೊಳಗಿತ್ತು. ಕನ್ನಡಿಗರ ಐಕ್ಯತೆಗಾಗಿ ನಡೆದ ಜಾಥಾದಲ್ಲಿ ಕನ್ನಡಪರ ಘೋಷಣೆ, ಕನ್ನಡಮ್ಮನಿಗೆ ಜೈಕಾರ ಝೇಂಕರಿಸಿತು. ಕೆಂಪು–ಹಳದಿ ಬಾವುಟಗಳು ರಾರಾಜಿಸಿದವು.
ಇಂತಹ ವಾತಾವರಣ ಸೃಷ್ಟಿಸಿದ್ದು, ಕನ್ನಡ ಜಾಗೃತಿ ವೇದಿಕೆ. ಕನ್ನಡಿಗರ ಐಕ್ಯತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ವೇದಿಕೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಿತ್ತು. ರಾಜ್ಯದ ವಿವಿಧೆಡೆ ಜನರು ಪಾಲ್ಗೊಂಡರು. ಇದರಲ್ಲಿ ಮಹಿಳೆಯ ಸಂಖ್ಯೆಯೇ ಅಧಿಕವಾಗಿತ್ತು.
ತಾಲ್ಲೂಕಿನ ಅತ್ತಿಬೆಲೆ ವೃತ್ತದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಅತ್ತಿಬೆಲೆ ಗಡಿಯವರೆಗೂ ಸಾಗಿತು. ತಮಟೆ ಸದ್ದಿಗೆ ಕನ್ನಡ ಪರ ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಕನ್ನಡ ಪರ ಘೋಷಣೆ ಕೂಗುತ್ತಾ ಗಡಿಯವರೆಗೂ ನಡೆದರು. ಬೆಳಗಾವಿ, ಕೋಲಾರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜಾಗೃತಿ ವೇದಿಕೆಯ ಕಾರ್ಯಕರ್ತರು ಆಗಮಿಸಿದ್ದರು.
ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದ ಶಾಸಕ ಬಿ.ಶಿವಣ್ಣ, ಕನ್ನಡಿಗರು ಹೃದಯವಂತವರು, ಯಾವುದೇ ರಾಜ್ಯದಿಂದ ರಾಜ್ಯಕ್ಕೆ ಬಂದರೆ ಅವರ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುತ್ತದೆ. ಅವರ ಬೆಳವಣಿಗೆಗೆ ಪೂರಕವಾಗಿರುವ ನೆಲದ ಭಾಷೆಯನ್ನು ಅವರೂ ಕಲಿಯಬೇಕು. ಅನ್ಯಭಾಷಿಕರಿಗೆ ಕನ್ನಡ ಕಲಿಸಬೇಕೆಂದು ಹೇಳಿದರು.
ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ, ನಗರೀಕರಣದ ಪ್ರಭಾವದಿಂದ ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗುತ್ತಿದ್ದಾರೆ. ರಾಜ್ಯ ಗಡಿಗಳು ಗಡಿ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿದೆ. ಆದರೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯು ತಮಿಳುನಾಡಿನ ಪ್ರಭಾವಕ್ಕೆ ಒಳಗಾಗಿಲ್ಲ. ಕಾವೇರಿ, ಭೂವಿವಾದ, ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ವಿವಿಧ ಪ್ರತಿಭಟನೆಗಳಿಗೆ ಈ ಸ್ಥಳ ವೇದಿಕೆಯಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪಟಾಪಟ್ ಪ್ರಕಾಶ್ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಸಿ.ದೇವೇಗೌಡ, ಮುಖಂಡರಾದ ಪಟಾಪಟ್ ರವಿ, ನಾಗರಾಜು ಸೋನಿ, ಪಟಾಪಟ್ ಶ್ರೀನಿವಾಸ್, ಅತ್ತಿಬೆಲೆ ಮುರಳಿ, ಆರ್.ಎಂ.ಎಸ್.ರವಿ, ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ಎಸ್.ಕೆ.ಗೌರೀಶ್, ಮಹಿಳಾ ಘಟಕದ ಅಧ್ಯಕ್ಷೆ ವತ್ಸಲ, ಪ್ರಧಾನ ಕಾರ್ಯದರ್ಶಿ ಕವಿತಾ ಪೇಟೇಮಠ್, ಉಪಾಧ್ಯಕ್ಷೆ ಲಕ್ಷ್ಮೀ ಹುದಲಿ, ಮುಖಂಡರಾದ ಅಗ್ನಿ ವೆಂಕಟೇಶ್, ಬಳಗಾರನಹಳ್ಳಿ ಕುಮಾರ್, ಕೆ.ನಾಗರಾಜ್, ಕೋದಂಡರಾಮ, ರಮೇಶ್ ಗೌಡ, ರಾಘವೇಂದ್ರ, ಮಂಜುನಾಥ್, ಮಧುಕುಮಾರ್, ಜಾವೇದ್, ಸತೀಶ್, ಬಶೀರ್, ಸೌಭಾಗ್ಯ ಇದ್ದರು.
ಕನ್ನಡ ಪರ ಸಂಘಟನೆಗಳಲ್ಲಿ ಮಹಿಳೆಯರು ಹೆಚ್ಚು ಪ್ರಾತಿನಿಧ್ಯ ನೀಡಬೇಕು. ಇದರಿಂದ ಕನ್ನಡ ಹೋರಾಟಕ್ಕೆ ಬಲ ಸಿಗಲಿದೆ. ಈ ನಿಟ್ಟಿನಲ್ಲಿ ಕನ್ನಡ ಜಾಗೃತಿ ವೇದಿಕೆಯು ರಾಜ್ಯದ್ಯಾಂತ ಮಹಿಳಾ ಘಟಕ ಸ್ಥಾಪಿಸಲಾಗುವುದುಮಂಜುನಾಥ ದೇವ ಅಧ್ಯಕ್ಷ ಕನ್ನಡ ಜಾಗೃತಿ ವೇದಿಕೆ
ಗಡಿಗೋಪುರ ಧಕ್ಕೆಯಾದರೆ ದಂಗೆ
ಅತ್ತಿಬೆಲೆ ಗಡಿಗೋಪುರವು ನಮ್ಮ ಅಸ್ಮಿತೆಯ ರೂಪಕವಾಗಿದೆ. ಮೈಸೂರು ಸಂಸ್ಥಾನದ ಹೆಗ್ಗುರುತಾಗಿದೆ. ಗಂಡಬೇರುಂಡ ಚಿಹ್ನೆ ಅತ್ತಿಬೆಲೆ ಗಡಿ ಗೋಪುರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹ ಕಟ್ಟಡಗಳು ಇರಬಾರದು ಎಂದು ಕೆಲ ಇಲಾಖೆಗಳು ತಿಳಿಸುತ್ತಿವೆ. ಗಡಿಗೋಪುರದ ವಿಷಯಕ್ಕೆ ಬಂದರೆ ಕನ್ನಡಿಗರು ದಂಗೆ ಏಳಬೇಕಾಗುತ್ತದೆ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಎಚ್ಚರಿಕೆ ನೀಡಿದರು. 1993ರಲ್ಲಿ ಕನ್ನಡ ಗಡಿ ಗೋಪುರದ ಮೇಲೆ ಕನ್ನಡ ಜಾಗೃತಿ ವೇದಿಕೆಯು ಕನ್ನಡ ಬಾವುಟವನ್ನು ಹಾರಿಸಿದ್ದರು. 32 ವರ್ಷಗಳಿಂದ ನಿರಂತರವಾಗಿ ಗಡಿ ಗೋಪುರದಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.