ಆನೇಕಲ್: ನಗರೀಕರಣದ ಪ್ರಭಾವದಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ ಮತ್ತು ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಉದ್ಯೋಗ ದೊರೆಯದಂತಾಗಿದೆ. ಅಭಿವೃದ್ಧಿ ಸ್ಥಳೀಯತೆಗೆ ಲಾಭ ಆಗುಬೇಕೇ ಹೊರತೆ ಕಂಟಕ ಆಗಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶಿವರಾಮೇಗೌಡ ಹೇಳಿದರು.
ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಮತ್ತು ಕಾರ್ಮಿಕರ, ರೈತರ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಕೈಗಾರಿಕರಣ, ನಗರೀಕರಣದ ಹೆಸರಿನಲ್ಲಿ ಕನ್ನಡದ ವಾತಾವರಣ ಕಾಣೆಯಾಗುತ್ತಿದೆ. ಪರಭಾಷಿಕರಿಗೆ ಕನ್ನಡಿಗರಿಗೆ ಹಲವು ವಿಭಾಗಗಲ್ಲಿ ಅನ್ಯಾಯವಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆ ಉಳಿಸಲು ಎಲ್ಲಾ ಸಂಘಟನೆಗಳು ಶ್ರಮಿಸಬೇಕು. ಯುವಕರು ಕನ್ನಡದ ಕಾಳಜಿಯನ್ನು ಬೆಳೆಸಿಕೊಳ್ಳಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗ ಎಂದು ಘೋಷಿಸಿದ್ದರು. ಆದರೆ ಉದ್ಯಮಿಗಳ ಬೆದರಿಕೆಗೆ ಹೆದರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ನ್ನೇ ಅಳಿಸಿದರು. ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಕನ್ನಡ ನೆಲ ಜಲ ನಾಡು ನುಡಿಗಾಗಿ ಎಲ್ಲರೂ ಒಂದಾಗಬೇಕೆಂದು ತಿಳಿಸಿದರು.
ವೇದಿಕೆಯ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ, ತಾಲ್ಲೂಕಿನಲ್ಲಿ ರೈತರ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರ ಬದುಕಿಗೆ ಆಪತ್ತು ಎದುರಾಗಿದೆ. ಹಾಗಾಗಿ ಸರ್ಕಾರ ಭೂ ಸ್ವಾಧೀನದ ಈ ಬಗ್ಗೆ ಮರುಪರಿಶೀಲನೆ ನಡೆಸಿ ತೀರ್ಮಾನದಿಂದ ಹಿಂದೆ ಸರಿಯಬೇಕು ಎಂದರು.
ವೇದಿಕೆಯ ಆನೇಕಲ್ ತಾಲ್ಲೂಕು ಅಧ್ಯಕ್ಷರಾಗಿ ನೇಮಕವಾದ ಮುನಿಕೃಷ್ಣ ಕನ್ನಡ ಮರಿ ಅವರಿಗೆ ಕನ್ನಡ ಧ್ವಜ ನೀಡುವ ಮೂಲಕ ನೇಮಕಾತಿ ಪತ್ರ ವಿತರಿಸಿದರು. ಜಿಲ್ಲಾ ಸಮರ ಸೇನಾ ಉಪಾಧ್ಯಕ್ಷ ಸನತ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ಅರೇಹಳ್ಳಿ ಮಂಜು, ಪ್ರಚಾರ ಸಮಿತಿ ಅಧ್ಯಕ್ಷ ವಿಶ್ವ, ರೈತ ಘಟಕದ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ಮುನಿಕೃಷ್ಣ, ಪದಾಧಿಕಾರಿಗಳಾದ ಶಶಿ, ವಿಜಿ, ಆನಂದ್, ಪ್ರಕಾಶ್, ವಿಷ್ಣು ಮಂಜು, ರೇಣುಕಮ್ಮ ಇದ್ದರು.
ಚಂದಾಪುರ-ಆನೇಕಲ್ ಮುಖ್ಯ ರಸ್ತೆಯಲ್ಲಿ ಅಂಗಡಿ ಮಳಿಗೆಗಳ ಫಲಕಗಳಲ್ಲಿ ಕನ್ನಡಕ್ಕೆ ಸರಿಯಾದ ಸ್ಥಾನ ನೀಡುತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲಿ ಹೋರಾಟ ರೂಪಿಸಲಾಗುವುದು.ಲೋಕೇಶ್ ಗೌಡ ಉಪಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.