ADVERTISEMENT

ಸರಳ ದ್ರೌಪದಾದೇವಿ ಕರಗ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 9:17 IST
Last Updated 5 ಆಗಸ್ಟ್ 2020, 9:17 IST
ಧರ್ಮರಾಯಸ್ವಾಮಿ ದೇವಾಲಯದ ಶ್ರೀಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವ ನಡೆಯಿತು
ಧರ್ಮರಾಯಸ್ವಾಮಿ ದೇವಾಲಯದ ಶ್ರೀಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವ ನಡೆಯಿತು   

ದೊಡ್ಡಬಳ್ಳಾಪುರ: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ನಗರದ ಚಿಕ್ಕಪೇಟೆಯ ಧರ್ಮರಾಯಸ್ವಾಮಿ ದೇವಾಲಯದ ಪ್ರಸಿದ್ದ ಶ್ರೀಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವ ಸೋಮವಾರ ರಾತ್ರಿ ಸರಳವಾಗಿ ನಡೆಯಿತು.

ಈ ಬಾರಿಯ ಕರಗವನ್ನು ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿಯ ವೈ.ಭೀಮರಾಜ್ ಹೊತ್ತು ಕರಗದ ಸಾಂಪ್ರದಾಯಿಕ ಧಾರ್ಮಿಕ ವಿಧಿಗಳನ್ನು ನಡೆಸಿದರು.

ಕರಗ ಮಹೋತ್ಸವದ ಅಂಗವಾಗಿ ಹಸಿಕರಗ ಹಾಗೂ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಧರ್ಮರಾಯಸ್ವಾಮಿ ದೇವಾಲಯದಿಂದ ಏಳು ಸುತ್ತಿನ ಕೋಟೆಗೆ ಆಗಮಿಸಿ,ದೇವಾಲಯ ಟ್ರಸ್ಟ್ ಕಾರ್ಯಕಾರಿ ಸಮಿತಿ, ಅರ್ಚಕರು ಹಾಗೂ ಸೀಮಿತ ಕುಲಬಾಂಧವರ ಭಾಗವಹಿಸುವಿಕೆಯಿಂದ ಸಾಂಕೇತಿಕ ಕರಗ ನಡೆಸಲಾಯಿತು. ಸಾರ್ವಜನಿಕರಿಗೆ ಕರಗ ಉತ್ಸವದಲ್ಲಿ ಭಾಗವಹಿಸಲು ಅವಕಾಶವಿಲ್ಲದಿದ್ದರಿಂದ ನಿರಾಶೆಗೊಳ್ಳಬೇಕಾಯಿತು.

ADVERTISEMENT

ಮೇ 7ರಂದು ಕರಗ ಮಹೋತ್ಸವ ನಡೆಯಬೇಕಿತ್ತು. ಏ.29ರಿಂದ ದೇವಾಲಯದಲ್ಲಿ ಧ್ವಜಾರೋಹಣ, ಪೂಜಾದಿಗಳು ವಿದ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಕರಗ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಈಗ ಸರಳವಾಗಿ ಆಚರಿಸುವಂತೆ ಸರ್ಕಾರ ಸೂಚಿಸಿದ್ದ ಹಿನ್ನೆಲೆಯಲ್ಲಿ ಸೀಮಿತ ಜನರೊಂದಿಗೆ ಆಚರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಕೊರೊನಾ ದೂರವಾಗಿ ವಿಜೃಂಭಣೆಯಿಂದ ಆಚರಿಸುವ ಸಂದರ್ಭ ಒದಗಿ ಬರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಧರ್ಮರಾಯಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.