ADVERTISEMENT

ಮಧ್ಯವರ್ತಿಗಳ ವಿರುದ್ಧ ಸೂಕ್ತ ಕ್ರಮ ಕರೀಗೌಡ ಎಚ್ಚರಿಕೆ

ಯಲಿಯೂರಿನ ‘ಕಂದಾಯ ಅದಾಲತ್‌’ನಲ್ಲಿ ನೂತನ ಜಿಲ್ಲಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 13:03 IST
Last Updated 29 ಆಗಸ್ಟ್ 2018, 13:03 IST
ಯಲಿಯೂರು ಗ್ರಾಮದಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಕರೀಗೌಡ ಅವರು ಜನರೊಂದಿಗೆ ಚರ್ಚೆ ನಡೆಸಿದರು
ಯಲಿಯೂರು ಗ್ರಾಮದಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಕರೀಗೌಡ ಅವರು ಜನರೊಂದಿಗೆ ಚರ್ಚೆ ನಡೆಸಿದರು   

ವಿಜಯಪುರ: ಕೆಲ ಮಧ್ಯವರ್ತಿಗಳು ‘ಕಂದಾಯ ಅದಾಲತ್’ನ ಕುರಿತು ಗ್ರಾಮಾಂತರ ಪ್ರದೇಶಗಳಲ್ಲಿನ ರೈತಾಪಿ ವರ್ಗದವರಿಗೆ ಮಾಹಿತಿ ನೀಡುವುದರ ಬದಲಿಗೆ ಅವರಿಗೆ ವಿಚಾರ ಮುಟ್ಟದಂತೆ ಮಾಡುವ ಹುನ್ನಾರಗಳು ನಡೆದಿವೆ. ಸಾರ್ವಜನಿಕರಿಂದ ಈ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿವೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಎಚ್ಚರಿಕೆ ನೀಡಿದರು.

ಯಲಿಯೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ‘ಕಂದಾಯ ಅದಾಲತ್’ನಲ್ಲಿ ಅವರು ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಯುವಂತಹ ‘ಕಂದಾಯ ಅದಾಲತ್’ನ ಸದುಪಯೋಗ ಪಡಿಸಿಕೊಂಡರೆ ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಾಲ್ಲೂಕು ಕಚೇರಿ, ನಾಡಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಅವರು ವಿವರಿಸಿದರು.

ADVERTISEMENT

ಕಂದಾಯ ಇಲಾಖೆಯ ಮೂಲಕ ಹಮ್ಮಿಕೊಳ್ಳುವ ಅದಾಲತ್‌ನಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ರೈತರು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಸಾಕಷ್ಟು ಮಂದಿ ಇಂತಹ ಅದಾಲತ್ ನಿರ್ಲಕ್ಷಿಸಿ ತಮ್ಮ ಕೆಲಸ ಕಾರ್ಯಗಳಿಗಾಗಿ ಮಧ್ಯವರ್ತಿಗಳ ಮೊರೆ ಹೋಗುವುದರ ಮೂಲಕ ಆರ್ಥಿಕ ಹೊರೆಯನ್ನು ಏರಿಸಿಕೊಳ್ಳುತ್ತಿದ್ದಾರೆ ಎಂದರು.

ಕೆಲಸಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಅದಾಲತ್, ಜನಸ್ಪಂದನೆ ಸೇರಿದಂತೆ ಇತರ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ರೈತರ ಪಹಣಿಗಳಲ್ಲಿ ಮೂರು ಹಾಗೂ ಒಂಬತ್ತನೇ ಕಾಲಂಗಳಿಗೆ ಸಂಬಂಧ ಪಟ್ಟಂತೆ ತಾಳೆಯಾಗದಿರುವ ತಿದ್ದುಪಡಿಗಳು, ಪಾವತಿ ಖಾತೆ, ವಿಭಾಗ ಖಾತೆ ಮುಂತಾದ ಸಮಸ್ಯೆಗಳನ್ನು ಜನರು ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಣೆ ಮಾಡಿದರು. ಒಟ್ಟು 29 ಅರ್ಜಿಗಳನ್ನು ಸ್ವೀಕರಿಸಿ 7 ಅರ್ಜಿಗಳನ್ನು ಸ್ಥಳದಲ್ಲಿ ವಿಲೇವಾರಿ ಮಾಡಿದರು. 22 ಅರ್ಜಿಗಳು ಬಾಕಿ ಉಳಿದುಕೊಂಡಿವೆ ಎಂದು ಪ್ರಭಾರ ಉಪ ತಹಶೀಲ್ದಾರ್ ಚಿದಾನಂದ್ ತಿಳಿಸಿದರು.

ಗ್ರಾಮದಲ್ಲಿನ ಗೋಮಾಳ, ಗ್ರಾಮಠಾಣೆಗೆ ಸೇರಿದ ಜಾಗದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿಕೊಂಡಿದ್ದ ಕಲ್ಲಿನ ಕಾಂಪೌಂಡ್ ತೆರವುಗೊಳಿಸಿ, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ರಸ್ತೆಯನ್ನು ನಿರ್ಮಾಣ ಮಾಡಿಕೊಟ್ಟರು. ತರಬೇತಿಯ ಉಪವಿಭಾಗಾಧಿಕಾರಿ ಮಮತಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ, ರಾಜಸ್ವ ನಿರೀಕ್ಷಕ ವೇಣುಗೋಪಾಲ್, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.