ADVERTISEMENT

ಆನೇಕಲ್‌ ಕ್ಷೇತ್ರ ಸ್ಥಿತಿಗತಿ: ಶಿವಣ್ಣಗೆ ತಡೆಯೊಡ್ಡಲು ಜೆಡಿಎಸ್, ಬಿಜೆಪಿ ತಂತ್ರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:14 IST
Last Updated 4 ಫೆಬ್ರುವರಿ 2023, 19:14 IST
ಬಿ.ಶಿವಣ್ಣ, ಹಾಲಿ ಶಾಸಕರು (ಕಾಂಗ್ರೆಸ್‌)
ಬಿ.ಶಿವಣ್ಣ, ಹಾಲಿ ಶಾಸಕರು (ಕಾಂಗ್ರೆಸ್‌)   

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ (ಮೀಸಲು) ಎರಡು ಅವಧಿಗಳಿಂದಲೂ ಕಾಂಗ್ರೆಸ್‌ ಶಾಸಕ ಬಿ.ಶಿವಣ್ಣ ಅವರ ಹಿಡಿತದಲ್ಲಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ಗೆಲುವಿನ ಓಟವನ್ನು ಕಟ್ಟಿ ಹಾಕಲು ಜೆಡಿಎಸ್‌ ಮತ್ತು ಬಿಎಸ್‌ಪಿ ತಂತ್ರಗಾರಿಕೆ ರೂಪಿಸುತ್ತಿವೆ.

ಬಿಜೆಪಿ ಭದ್ರಕೋಟೆಯಾಗಿದ್ದ ಆನೇಕಲ್ ಕ್ಷೇತ್ರವನ್ನು 2013 ಮತ್ತು 2018ರಲ್ಲಿ ಕಾಂಗ್ರೆಸ್‌ ಶಾಸಕ ಶಿವಣ್ಣ ಅವರು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಇವರ ಹ್ಯಾಟ್ರಿಕ್ ಗೆಲುವು ತಡೆಯಲು ಬಿಜೆಪಿಯಿಂದ ಆಕಾಂಕ್ಷಿಗಳು ಉತ್ಸುಕರಾಗಿದ್ದಾರೆ. ಜೆಡಿಎಸ್‌ ಮತ್ತು ಬಿಎಸ್‌ಪಿ ಕೂಡ ತಮ್ಮದೇ ತಂತ್ರ ಹೆಣೆಯುತ್ತಿವೆ.

ಕೇಂದ್ರ ಸಚಿವ ಆನೇಕಲ್‌ನ ಎ.ನಾರಾಯಣಸ್ವಾಮಿ ಅವರು ನಾಲ್ಕು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.

ADVERTISEMENT

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮು, ಟಿ.ವಿ.ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹುಲ್ಲಹಳ್ಳಿ ಶ್ರೀನಿವಾಸ್‌, ಬಂಡಾಪುರ ರಾಮಚಂದ್ರ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸಂದೀಪ್‌, ಮುಖಂಡರಾದ ಪಟಾಪಟ್‌ ಶ್ರೀನಿವಾಸ್‌, ಮಂಜುನಾಥ್‌ ಮದ್ದೂರಪ್ಪ, ಬಿ.ವೈ.ರವಿಚಂದ್ರ ಬಿಜೆಪಿ ಆಕಾಂಕ್ಷಿಗಳು.

ತಾಲ್ಲೂಕಿನ ಎಲ್ಲೆಡೆ ಗೋಡೆ ಬರಹ, ಬ್ಯಾನರ್‌ಗಳು, ಕಟೌಟ್‌ಗಳು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ನೆಲೆ ಹೊಂದಿರುವ ಜೆಡಿಎಸ್‌ ಈ ಬಾರಿ ಕೆ.ಪಿ.ರಾಜು ಅವರನ್ನು ಕಣಕ್ಕಿಳಿಸುತ್ತಿದೆ. ಕ್ಷೇತ್ರದೆಲ್ಲೆಡೆ ಪ್ರಚಾರದಲ್ಲಿ ನಡೆಸುತ್ತಿದ್ದಾರೆ.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೆಲೆ ವಿಸ್ತರಿಸಿಕೊಳ್ಳುತ್ತಿರುವ ಬಿಎಸ್‌ಪಿ ಚಿನ್ನಪ್ಪ ವೈ.ಚಿಕ್ಕಹಾಗಡೆ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಇವರ ನೇತೃತ್ವದಲ್ಲಿ ವಿವಿಧ ವರ್ಗಗಳನ್ನು ಒಗ್ಗೂಡಿಸಿ ಚುಣಾವಣೆ ತಂತ್ರ ರೂಪಿಸುತ್ತಿದ್ದಾರೆ. ಎಎಪಿ ಪಕ್ಷದಿಂದ ಮುನೇಶ್‌, ವಿಸಿಕೆ ಪಕ್ಷದಿಂದ ಎಂ.ಸಿ.ಹಳ್ಳಿ ವೇಣು ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಬಿಜೆಪಿಯಲ್ಲಿ 8 ಆಕಾಂಕ್ಷಿಗಳು: ಬಿಜೆಪಿಯಲ್ಲಿ 8ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮದೇ ಆದ ಪ್ರಭಾವ ಬಳಸಿ ಟಿಕೆಟ್‌ ಪಡೆಯಬೇಕೆಂಬ ಉಮೇದಿನಲ್ಲಿದ್ದಾರೆ. ಈ ನಡುವೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಪರ್ಧಿಸುವರು ಎಂಬ ಮಾತುಗಳು ಕೇಳಿಬರುತ್ತಿವೆ.

Caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.