ADVERTISEMENT

ಬಂದ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 7:12 IST
Last Updated 6 ಡಿಸೆಂಬರ್ 2020, 7:12 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು   

ದೊಡ್ಡಬಳ್ಳಾಪುರ: ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ದೊಡ್ಡಬಳ್ಳಾಪುರದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ವಾಣಿಜ್ಯ ಪ್ರದೇಶದಲ್ಲಿ ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಮಾರುಕಟ್ಟೆ ಪ್ರದೇಶ ಸಹ ಬಂದ್ ಆಗಿತ್ತು. ಎಪಿಎಂಸಿಯಲ್ಲಿ ಬಹಳಷ್ಟು ಅಂಗಡಿಗಳು ತೆರೆದಿದ್ದು, ತರಕಾರಿಗಳ ವ್ಯಾಪಾರ ನಡೆಯಿತು. ನೇಕಾರಿಕೆ ಉದ್ಯಮ ಎಂದಿನಂತಿತ್ತು. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಬೆಳಿಗ್ಗೆ ಎಂದಿನಂತೆ ಆರಂಭವಾಯಿತು. ಈ ವೇಳೆ ಬಸ್ ಸಂಚಾರ ಕೈಗೊಳ್ಳದೆ, ಬಂದ್‍ಗೆ ಬೆಂಬಲಿಸುವಂತೆ ಸಾರಿಗೆ ಇಲಾಖೆ ಸಿಬ್ಬಂದಿಗೆ ಪ್ರತಿಭಟನಾಕಾರರು ಮನವಿ ಮಾಡಿದರು. ಆದರೆ, ಪ್ರಯಾಣಿಕರ ಕೊರತೆಯಿದ್ದರೂ ಬಸ್ ಸಂಚಾರ ಎಂದಿನಂತೆ ಸಂಚರಿಸಿತು. ನಂತರ ಬೈಕ್ ರ್‍ಯಾಲಿಯಲ್ಲಿ ತೆರಳಿದ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ತೆರೆದಿದ್ದ ಹೋಟೆಲ್ ಹಾಗೂ ಕೆಲವು ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು.

ತಾಲ್ಲೂಕಿನ ಎಲ್ಲ ಬ್ಯಾಂಕ್‍ಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೈಗಾರಿಕಾ ಪ್ರದೇಶದಲ್ಲಿ ಹಲವು ಕಾರ್ಖಾನೆಗಳಿಗೆ ರಜೆ ಘೋಷಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ADVERTISEMENT

ಪ್ರತಿಭಟನಾ ಮೆರವಣಿಗೆ: ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಒಗ್ಗಟ್ಟು ಪ್ರದರ್ಶಿಸಲಾಯಿತು. ನಂತರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕ ಬಸವಗೌಡಪಾಟೀಲ್ ಯತ್ನಾಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಮರಾಠ ಅಭಿವೃದ್ಧಿ ಪ್ರಾಕಾರ ಸ್ಥಾಪನೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಜಾಗೃತ ಪರಿಷತ್‌ ಕಾರ್ಯದರ್ಶಿ ಟಿ.ಎನ್.ಪ್ರಭುದೇವ್, ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ತಾಲ್ಲೂಕು ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ದಲಿತ ಸಂಘಟನೆ ಮುಖಂಡ ಮಾ.ಮುನಿರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಶಿವರಾಜ್‍ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್, ಜಿಲ್ಲಾ ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಚೌಡರಾಜ್, ಕನ್ನಡ ಜಾಗೃತ ವೇದಿಕೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ಕರವೇ ತಾಲ್ಲೂಕು ಅಧ್ಯಕ್ಷ ಮರುಳಾರಾಧ್ಯ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತಾಲೂಕು ಘಟಕ, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ದಲಿತ ವಿಮೋಚನಾ ಸೇನೆ, ಕನ್ನಡ ಜಾಗೃತ ಪರಿಷತ್ತು, ಜಯ ಕರ್ನಾಟಕ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಭುವನೇಶ್ವರಿ ಕನ್ನಡ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.