
ಆನೇಕಲ್: 2026-27ನೇ ಸಾಲಿನ ರಾಜ್ಯ ಬಜೆಟ್ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲನೇ ವಾರದಲ್ಲಿ ಮಂಡನೆ ಯಾಗಲಿದ್ದು, ಆನೇಕಲ್ ತಾಲ್ಲೂಕಿನ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ ಜನ.
ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೂ ಮೆಟ್ರೊ ವಿಸ್ತರಣೆ ಮಾಡಬೇಕು. ಇದೇ ಮೆಟ್ರೊ ಮಾರ್ಗವನ್ನು ಇಂಡ್ಲವಾಡಿಯಲ್ಲಿ ಉದ್ದೇಶಿತ ಅಂತರರಾಷ್ಟ್ರೀಯ ಕ್ರೀಡಾಂಗಣ ವರೆಗೂ ವಿಸ್ತರಣೆ ಮಾಡಬೇಕು. ಆನೇಕಲ್ ತಾಲೂಕು ಕ್ರೀಡಾಂಗಣಕ್ಕೆ ಅನುದಾನ, ಆಸ್ಪತ್ರೆಗಳ ಮೇಲ್ದರ್ಜೆ, ಮಿನಿವಿಧಾನಸೌಧ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿಗೆ ಅನುದಾನ ದೊರೆಯಬಹುದೆಂಬ ನಿರೀಕ್ಷೆ ಭಾರ ಹೊತ್ತಿದ್ದಾರೆ ಸ್ಥಳೀಯರು.
ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿವೆ. ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಮೀಸಲಿಡಬೇಕೆಂಬುದು ಇಲ್ಲಿನ ಕೈಗಾರಿಕೋದ್ಯಮ ಒತ್ತಾಯ.
ದೊಮ್ಮಸಂದ್ರದಲ್ಲಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, ತಾಲೂಕಿನ ಸರ್ಜಾಪುರ ಅತ್ತಿಬೆಲೆ, ಜಿಗಣಿಯಲ್ಲಿಯೂ ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂಬುದು ಸ್ಥಳೀಯರ ಆಗ್ರಹ.
ಆನೇಕಲ್ ತಾಲ್ಲೂಕಿನ ಹೋಬಳಿಗಳಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಬೇಕು. ಇದರಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗುತ್ತದೆ. ಆನೇಕಲ್ ಪಟ್ಟಣದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಇದ್ದರೂ ಮಳೆ ಬಂದಾಗ ಕೆರೆಯಾಗುವುದರಿಂದ ಯಾವುದೇ ಕ್ರೀಡಾ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೋಬಳಿಗೊಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಬೇಕು. ಪಟ್ಟಣದ ಹೊಸ ಮಾಧ್ಯಮಿಕ ಶಾಲೆಯ ಮೈದಾನವನ್ನು ಕ್ರೀಡಾಂಗಣವಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕೆಂದು ಕ್ರೀಡಾಪಟು ಶಾಲಿನಿ ಮನವಿ ಮಾಡಿದ್ದಾರೆ.
ಪ್ರಮುಖ ಬೇಡಿಕೆ
ಅತ್ತಿಬೆಲೆ ಹಾಗೂ ಇಂಡ್ಲವಾಡಿಯಲ್ಲಿ ಉದ್ದೇಶಿತ ಅಂತರರಾಷ್ಟ್ರೀಯ ಕ್ರೀಡಾಂಗಣ ವರೆಗೆ ಮೆಟ್ರೊ ವಿಸ್ತರಣೆ
ಐದು ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ
ಪ್ರತಿ ಪುರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಪ್ರತಿ ಹೋಬಳಿಯಲ್ಲೂ ಕ್ರೀಡಾಂಗಣ
ಬೊಮ್ಮಸಂದ್ರದವರೆಗೂ ಮೆಟ್ರೊ ಸೇವೆ ಲಭ್ಯವಿದೆ. ಈ ಸೇವೆಯನ್ನು ಅತ್ತಿಬೆಲೆಯವರೆಗೂ ವಿಸ್ತರಣೆ ಮಾಡಬೇಕು. ಪ್ರಸ್ತಕ ಬಜೆಟ್‌ನಲ್ಲಿ ಅತ್ತಿಬೆಲೆಯವರೆಗೂ ಮೆಟ್ರೊ ವಿಸ್ತರಣೆ ಆಗುವ ನಿರೀಕ್ಷೆ ಇದೆಬಿ.ಶಿವಣ್ಣ ಶಾಸಕ
ಆನೇಕಲ್ ತಾಲೂಕು ಐದು ಕೈಗಾರಿಕಾ ಪ್ರದೇಶಗಳಿವೆ. ಹೆಚ್ಚಿನ ಪ್ರಕರಣಗಳಿವೆ. ಬೆಂಗಳೂರಿನಿಂದ ಸಹ ಹೆಚ್ಚು ಮುಂದಿ ವಕೀಲರು ಆನೇಕಲ್‌ಗೆ ಆಗಮಿಸುತ್ತಾರೆ ಹಾಗಾಗಿ ಸುಸಜ್ಜಿತ ವಕೀಲರ ಭವನ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕುಮೋಹನ್ ಕಾಂತ, ವಕೀಲ
ತಾಲ್ಲೂಕಿನ ಎಲ್ಲಾ ಪ್ರದೇಶಗಳಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗಿದೆ. ಸಂಚಾರ ಪೊಲೀಸ್ ಠಾಣೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಸುಸಜ್ಜಿತ ಸಂಚಾರ ಪೊಲೀಸ್ ಠಾಣೆ ನಿರ್ಮಿಸಬೇಕುವೆಂಕಟೇಶ್, ಸ್ಥಳೀಯ
ಮುತ್ಯಾಲಮಡು ಪ್ರವಾಸಿ ತಾಣವಾಗಲಿ
ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲಮಡು ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಬೆಂಗಳೂರಿನ ಸೆರಗಿನಲ್ಲಿ ಉತ್ತಮವಾದ ಪ್ರವಾಸಿ ತಾಣವಿದ್ದರೂ ಸೌಲಭ್ಯ ಕೊರತೆಯಿಂದ ಮತ್ತು ಪ್ರಚಾರ ಕೊರತೆಯಿಂದ ಮುತ್ಯಾಲಮಡುವು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಣ್ಮರೆಯಾಗಿದೆ. ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು. ರಸ್ತೆ ಅಭಿವೃದ್ಧಿ ಭದ್ರತೆ ಸೇರಿದಂತೆ ಪ್ರವಾಸಿಗರಿಗೆ ಅವಶ್ಯಕತೆ ಇರುವ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.