
ದೇವನಹಳ್ಳಿ: ಬದುಕು ನೀಡಿದ ಸಂಕಷ್ಟಗಳನ್ನು ಸೋಬಾನೆ ಪದಗಳ ಶಕ್ತಿಯಿಂದ ಎದುರಿಸಿ ಹಳ್ಳಿಯ ಜಾನಪದ ಪರಂಪರೆ, ಸೊಗಡನ್ನು ಜೀವಂತವಾಗಿ ಉಳಿಸಿಕೊಂಡ ಹಳಿಯೂರು ಗ್ರಾಮದ ಸೋಬಾನೆ ಬಚ್ಚಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗೌರವ ಲಭಿಸಿದೆ.
ಬದುಕಿನ ಉಸಿರಿನಂತೆ ಜಾನಪದ ಪದಗಳನ್ನು ಉಳಿಸಿಕೊಂಡಿರುವ ಅಪರೂಪದ ಹೆಣ್ಣುಮಕ್ಕಳಲ್ಲಿ ಹಳಿಯೂರು ಗ್ರಾಮದ ಸೋಬಾನೆ ಚಿಕ್ಕಮ್ಮ ಬಚ್ಚಮ್ಮ ಪ್ರಮುಖರು.
ಒಂದು ಕಾಲದಲ್ಲಿ ಹಳ್ಳಿಗಳ ಬೆಳಗಿನ ಜಾವವನ್ನು ಎಬ್ಬಿಸುತ್ತಿದ್ದ ಜನಪದ ಗಾಯನ, ಸಂಜೆಯ ಆಯಾಸ ಕರಗಿಸುತ್ತಿದ್ದ ಸೋಬಾನೆ ಪದಗಳು, ಗದ್ದೆ, ಗುಡ್ಡಗಳಲ್ಲಿ ಹರಿದುಹೋಗುತ್ತಿದ್ದ ರಂಗಗೀತೆಗಳು ಇವೆಲ್ಲವೂ ಇಂದು ನೆನಪುಗಳಾಗಿವೆ. ಆದರೆ ಇಂತಹ ಮೌನದ ನಡುವೆ ಕೆಲವೇ ಕೆಲವು ಧ್ವನಿಗಳು ಇನ್ನೂ ಜನಪದ ಗೀತೆಗಳನ್ನು ಉಲಿಯುತ್ತಿವೆ.
ದೇವನಹಳ್ಳಿ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ಸಾದಪ್ಪ–ನಾರಾಯಣಮ್ಮ ದಂಪತಿ ಮಗಳಾಗಿ 1954ರಲ್ಲಿ ಜನಿಸಿದ ಬಚ್ಚಮ್ಮ ಸಂಕಷ್ಟದ ನೆರಳಲ್ಲಿಯೇ ಬಾಲ್ಯ ಕಳೆದರು. ಕಡು ಬಡತನದ ಕಷ್ಟಗಳಿಂದ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸಿದರು. ಬದುಕನ್ನು ಸಾಗಿಸಲು ಬಾಲ ಕಾರ್ಮಿಕಳಾಗಿ ಜೀತಕ್ಕೆ ಹೊಗಬೇಕಾಯಿತು.
ಆ ದಿನಗಳಲ್ಲಿ ಬದುಕಿನ ಆಯಾಸ ತಗ್ಗಿಸಿದ್ದು ಪದಗಳು. ಹಿರಿಯರು ಗುನುಗುತ್ತಿದ್ದ ಸೋಬಾನೆ ಪದ ಹಾಗೂ ರಾಗಿ ಬೀಸೋ ಪದಗಳು. ಕೆಲಸ ಮಾಡುವಾಗ ತಾನೇ ಗುನುಗುತ್ತಿದ್ದ ಈ ದೇಸಿ ಪದಗಳು ಬಚ್ಚಮ್ಮ ಅವರ ಮನಸ್ಸಿಗೆ ಆಸರೆಯಾಗಿದ್ದವು. ದುಡಿಮೆ, ದಣಿವು, ನೋವು ಇವೆಲ್ಲವೂ ಪದಗಳ ನಡುವೆ ಮಂಜಿನಂತೆ ಕರಗುತ್ತಿದ್ದವು.
15ನೇ ವಯಸ್ಸಿನಲ್ಲಿ ಸೋದರ ಮಾವ ಜಯಪ್ಪನ ಕೈಹಿಡಿದ ಬಚ್ಚಮ್ಮ ಬದುಕಿನಲ್ಲಿ ಹೊಣೆಗಾರಿಕೆ ಹೆಚ್ಚಿತು. ಹತ್ತಾರು ಜನರಿದ್ದ ದೊಡ್ಡ ಸಂಸಾರ. ಅಡುಗೆ, ರಾಗಿ ಬೀಸುವುದು, ಭತ್ತ ಕುಟ್ಟುವುದು ಅವರ ದಿನಚರಿ ಆದವು. ಆದರೆ ಈ ದುಡಿಮೆಯ ನಡುವೆ ಸೋಬಾನೆ ಪದಗಳು ಅವರ ಕಂಠವನ್ನು ಬಿಡಲಿಲ್ಲ. ಅವು ಬದುಕಿನ ಭಾಗವಾಗಿ ಉಸಿರಿನಂತೆ ಹೊರಹೊಮ್ಮುತ್ತಿದ್ದವು.
ಮೂರು ದಶಕಗಳ ನಂತರ ಆಕಾಶವಾಣಿಯಲ್ಲಿ ಸೋಬಾನೆ ಪದಗಳನ್ನು ಹಾಡುವ ಅವಕಾಶ ದೊರೆತದ್ದು ಅವರ ಬದುಕಿನ ದೊಡ್ಡ ತಿರುವು. ಮೌನವಾಗಿ ಬದುಕುತ್ತಿದ್ದ ಜಾನಪದ ಧ್ವನಿಗೆ ವೇದಿಕೆ ಸಿಕ್ಕಿತು. ಅಂದಿನಿಂದ ಬಚ್ಚಮ್ಮ ಅವರೊಳಗಿನ ಕಲಾವಿದೆ ಸಮಾಜಮುಖಿಯಾಗಲು ಆರಂಭಿಸಿದರು. ಜಾನಪದ ಕಲೆ ಕೇವಲ ಹಾಡು, ಕುಣಿತವಲ್ಲ. ಅದು ಬದುಕನ್ನು ಕಟ್ಟುವ ಶಕ್ತಿ ಎಂಬ ಅರಿವು ಅವರಲ್ಲಿ ಗಟ್ಟಿಯಾಗಿ ಬೆಳೆಯಿತು.
ಕೆಳವರ್ಗದ ಮಹಿಳೆಯರ ಬದುಕಿಗೆ ಬೆಳಕಾಗಬೇಕೆಂಬ ಸಂಕಲ್ಪದೊಂದಿಗೆ ಮಹಿಳಾ ಸಂಘಗಳನ್ನು ಸ್ಥಾಪಿಸಿ, ಜಾನಪದ ತಂಡವನ್ನು ಕಟ್ಟಿದರು. ಯುವಜನ ಮೇಳಗಳು ಹಾಗೂ ವಿವಿಧ ವೇದಿಕೆಗಳಲ್ಲಿ ಸೋಬಾನೆ ಪದ, ತತ್ವ ಪದ, ಸಂಪ್ರದಾಯ ಪದಗಳ ಜೊತೆಗೆ ರಾಗಿ ಬೀಸೋ ಪದ, ಜಾನಪದ ಕುಣಿತ, ಕೋಲಾಟ, ಭಜನೆ ಮತ್ತು ನಾಟಕಗಳನ್ನು ಪ್ರದರ್ಶಿಸಿದರು.
ಹಳ್ಳಿಯಿಂದ ತಾಲ್ಲೂಕು, ಜಿಲ್ಲೆಯಿಂದ ವಿಭಾಗ ಮಟ್ಟದವರೆಗೆ ಅವರ ಕಲಾಸೇವೆ ಪಸರಿಸಿತು. ಅನೇಕ ಪ್ರಶಸ್ತಿಗಳು ಅವರ ಹೆಜ್ಜೆಗುರುತನ್ನು ಅನುಸರಿಸಿದವು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊರೆತ ಗೌರವ, ಅವರ ಜಾನಪದ ಬದುಕಿಗೆ ಸಾಮಾಜಿಕ ಮಾನ್ಯತೆ ನೀಡಿತು. ಇದೀಗ ಸೋಬಾನೆ ಪದ, ತತ್ವ ಪದ ಮತ್ತು ಸಂಪ್ರದಾಯ ಪದ ವಿಭಾಗದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿರುವುದು, ದಶಕಗಳ ಅಚಲ ಶ್ರಮಕ್ಕೆ ದೊರೆತ ರಾಜ್ಯಮಟ್ಟದ ಗೌರವವಾಗಿದೆ.
ಈ ಸಾಧನೆಯ ಹಿಂದೆ ಪತಿ ಜಯಪ್ಪ ಅವರ ಮೌನ ಬೆಂಬಲವೂ ಇದೆ. ಪತ್ನಿಯ ಕಲಾಸೇವೆಗೆ ಪೂರಕವಾಗಿ ನಿಂತ ಅವರ ಸಹಕಾರ, ಈ ಜಾನಪದ ಪಯಣವನ್ನು ಇನ್ನಷ್ಟು ದೃಢಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.