ದೇವನಹಳ್ಳಿ: ಭೂಸ್ವಾಧೀನ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ ಬಳಿಕವೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರಿಗೆ ನೋಟಿಸ್ ನೀಡಿರುವುದ ಗೊಂದಲಕ್ಕೆ ಕಾರಣವಾಗಿದೆ.
ರೈತರು ಮತ್ತು ಹೋರಾಟಗಾರರು ಸೋಮವಾರ ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮತ್ತು ಅರವಿಂದ ಭವನದಲ್ಲಿರುವ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮೂರೂವರೆ ವರ್ಷಗಳ ನಿರಂತರ ಹೋರಾಟದ ಫಲವಾಗಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ 1,777 ಎಕರೆ ಭೂಸ್ವಾಧೀನವನ್ನು ಜುಲೈ 15ರಂದು ಸರ್ಕಾರ ಕೈಬಿಟ್ಟಿತ್ತು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಅಧಿಕೃತ ಘೋಷಣೆ ಮಾಡಿದ್ದರು.
ಇದೀಗ ಹ್ಯಾಡಾಳ, ಗೋಕರೆಬಚ್ಚೇನಹಳ್ಳಿ ಗ್ರಾಮಗಳ 439 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 6ರಂದು ದರ ನಿಗದಿ ಸಭೆ ಕರೆಯಲಾಗಿದೆ. ಈ ಕುರಿತು ರೈತರಿಗೆ ನೋಟಿಸ್ ನೀಡಲಾಗಿದೆ.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕೆಐಎಡಿಬಿ ಅಧಿಕಾರಿಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು ಮುಖ್ಯಮಂತ್ರಿ ಘೋಷಿಸಿದಂತೆ 13 ಹಳ್ಳಿಗಳ ಎಲ್ಲಾ ಭೂಮಿಗಳ ಡಿನೋಟಿಫಿಕೇಶನ್ ಮುಗಿಯುವವರೆಗೆ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸದಂತೆ ಆಗ್ರಹಿಸಿದೆ.
ತಮ್ಮ ಒತ್ತಾಯ ಕೂಡಲೇ ಈಡೇರಿಸದಿದ್ದರೆ ಮುಂದಿನ ಎಲ್ಲ ಪರಿಣಾಮಗಳಿಗೆ ಕೆಐಎಡಿಬಿ ಕಚೇರಿಯೇ ಹೊಣೆ ಎಂದು ಎಚ್ಚರಿಕೆ ನೀಡಲಾಗಿದೆ.
ನಕಲಿ ದಾಖಲೆ ವಿರುದ್ಧ ದೂರು
‘ಕೆಐಎಡಿಬಿ ಭೂಸ್ವಾಧೀನಕ್ಕೆ ಒಪ್ಪಿಗೆ ಇದೆ ಎಂದು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಅದನ್ನು ನಂಬಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹ್ಯಾಡಾಳ ಗ್ರಾಮದ ರೈತ ಲಗುಮಯ್ಯ ಎಂಬುವರು ಈ ಸಂಬಂಧ ವಿಶೇಷ ಭೂಸ್ವಾಧೀನ ಅಧಿಕಾರಿಗೆ ದೂರು ಕೊಟ್ಟಿದ್ದಾರೆ. ಭೂಸ್ವಾಧೀನಕ್ಕೆ ನನ್ನ ಒಪ್ಪಿಗೆ ಇದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಅಥವಾ ನಕಲಿ ಸಹಿ ಹಾಕಿ ಅಧಿಕಾರಿಗಳ ದಾರಿ ತಪ್ಪಿಸಿರುವವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.