ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ವಿಸ್ತರಣೆ ಶೀಘ್ರ ಆರಂಭ

2029ರಲ್ಲಿ ವಿಮಾನ ನಿಲ್ದಾಣದ ಸಾಮರ್ಥ್ಯ 11 ಕೋಟಿ ಪ್ರಯಾಣಿಕರಿಗೆ ಏರಿಸುವ ಗುರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 21:01 IST
Last Updated 16 ಸೆಪ್ಟೆಂಬರ್ 2025, 21:01 IST
<div class="paragraphs"><p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಸ್ತರಣೆ ಯೋಜನೆ ಮುಂದಿನ ವರ್ಷದ ಆರಂಭದಲ್ಲಿ ಆರಂಭಗೊಳ್ಳಲಿದ್ದು, ಈ ಯೋಜನೆಯಡಿ ಟರ್ಮಿನಲ್ 2ಕ್ಕೆ 2.78 ಲಕ್ಷ ಚದರ ಮೀಟರ್ ಹೆಚ್ಚಳವಾಗಲಿದೆ.

40 ಏಪ್ರನ್ ಸ್ಟ್ಯಾಂಡ್‌ಗಳನ್ನು (ವಿಮಾನ ನಿಲ್ಲಿಸಿ ನಿರ್ವಹಣೆ ಮಾಡುವ ಜಾಗ) ನಿರ್ಮಿಸುವುದರೊಂದಿಗೆ, ಟರ್ಮಿನಲ್ 1 ಮತ್ತು 2 ಅನ್ನು ನೇರವಾಗಿ ಸಂಪರ್ಕಿಸುವ 28,000 ಚದರ ಮೀಟರ್ ಉದ್ದದ ಪಾದಚಾರಿ ಮಾರ್ಗ (ವಾಕ್‌ವೇ) ಸೌಲಭ್ಯ ಕೂಡ ಸಿದ್ಧವಾಗಲಿದೆ.

ADVERTISEMENT

ಈ ಹೊಸ ಕಾಮಗಾರಿಯು 2028ರೊಳಗೆ ಪೂರ್ಣಗೊಳ್ಳಲಿದೆ. 2024–25ನೇ ಸಾಲಿನಲ್ಲಿ  4.18 ಕೋಟಿ ಪ್ರಯಾಣಿಕರನ್ನು ನಿರ್ವಹಣೆ ಮಾಡಿದ್ದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತುತ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯವು 8.5 ಕೋಟಿಯಷ್ಟಿದೆ. ಪ್ರತಿದಿನ ಸರಾಸರಿ 1.15 ಲಕ್ಷ ಮಂದಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದು, ಈ ಪೈಕಿ 70 ಸಾವಿರ ಪ್ರಯಾಣಿಕರು ಟರ್ಮಿನಲ್ 1 ಮತ್ತು 2ನೇ ಟರ್ಮಿನಲ್ ಅನ್ನು 45 ಸಾವಿರ ಮಂದಿ ಬಳಸುತ್ತಾರೆ. 

ಟರ್ಮಿನಲ್ 1 ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಅದನ್ನು ಮೀರಿದ ಸಂಖ್ಯೆಯ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. 2023ರಲ್ಲಿ ಕಾರ್ಯಾರಂಭಗೊಂಡ ಟರ್ಮಿನಲ್ 2ರ ಮೊದಲನೇ ಹಂತವೂ 12.55 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು, ವಾರ್ಷಿಕ 1.6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಇದು 2.5 ಕೋಟಿ ಸಾಮರ್ಥ್ಯ ತಲುಪಲಿದೆ.

ಸೋಮವಾರ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್‌) ಟರ್ಮಿನಲ್ 2ರ ಹಂತ 2 ನಿರ್ಮಾಣಕ್ಕಾಗಿ ಎಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ (ಇಪಿಸಿ) ಒಪ್ಪಂದಕ್ಕಾಗಿ ಆಸಕ್ತಿ ಸೂಚನೆಗಳನ್ನು ಆಹ್ವಾನಿಸಲಾಗಿದೆ.

‘ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಹಂತ 2, ಹಂತ 1ರ ವಿಸ್ತರಣೆ ಆಗಿದ್ದು, ‘ಗಾರ್ಡನ್‌ನಲ್ಲಿರುವ ಟರ್ಮಿನಲ್’ ಎಂಬ ಥೀಮ್‌ನಂತೆ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತದೆ. ಟರ್ಮಿನಲ್ 1 ಈಗಾಗಲೇ ಸಾಮರ್ಥ್ಯ ಮೀರಿದ್ದು, ಟರ್ಮಿನಲ್ 2ರ ಹಂತ 1 ಕೂಡ ಮುಂದಿನ ಐದು–ಆರು ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಲಿದೆ. ಅದಾಗಲೇ ಹಂತ 2 ಸಿದ್ಧವಾಗಲಿದೆ. ಅಗತ್ಯ ವಿನ್ಯಾಸಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ’ ಎಂದು ಬಿಐಎಎಲ್‌ ವಕ್ತಾರರು ತಿಳಿಸಿದ್ದಾರೆ.

ಬಿಐಎಎಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಕಿ ರಘುನಾಥ್ ಮುಂಚೆ ಮಾತನಾಡಿ, ‘ವಿಮಾನ ನಿಲ್ದಾಣವು 2029ರೊಳಗೆ ಏರ್‌ಸೈಡ್, ಲ್ಯಾಂಡ್‌ಸೈಡ್ ಹಾಗೂ ಟರ್ಮಿನಲ್ ಸಾಮರ್ಥ್ಯ ವಿಸ್ತರಣೆಗೆ ₹17,000 ಕೋಟಿ ಹೂಡಿಕೆ ಮಾಡಲಾಗುವುದು. ಇದೇ ವೇಳೆ, ಮೂರನೇ ಟರ್ಮಿನಲ್ ನಿರ್ಮಾಣದ ಯೋಜನೆಯೂ ಮುಂದುವರಿದಿದ್ದು, ಇದರೊಂದಿಗೆ ವಾರ್ಷಿಕ ಸಾಮರ್ಥ್ಯವನ್ನು 11 ಕೋಟಿ ಪ್ರಯಾಣಿಕರಿಗೆ ಏರಿಸುವ ಗುರಿಯಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಬೆಂಗಳೂರಿಗೆ ಎರಡನೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರವೂ ಯೋಜನೆ ರೂಪಿಸುತ್ತಿದ್ದು, ಕನಕಪುರ ರಸ್ತೆಯ ದಕ್ಷಿಣ ಭಾಗದಲ್ಲಿರುವ ಎರಡು ಸ್ಥಳಗಳನ್ನು ಒಳಗೊಂಡಂತೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮರುನಿರ್ಮಿಸಿ ದೇಶೀಯ ಹಾರಾಟಗಳಿಗೆ ಮತ್ತೆ ತೆರೆಯುವ ಆಲೋಚನೆಯೂ ಇದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.