ADVERTISEMENT

‘ಕೆಂಪೇಗೌಡರ ದೂರದರ್ಶಿತ್ವ, ಚಿಂತನೆ ಮಾದರಿ’

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:08 IST
Last Updated 27 ಜೂನ್ 2019, 16:08 IST
ಕನಕಪುರ ನಗರದ ತಾಲ್ಲೂಕು ಕ್ರೀಡಾಂಗಣದ ಹಿಂಭಾಗದಲ್ಲಿನ ಅರಳಿಕಟ್ಟೆ ಹಿರಿಯ ನಾಗರೀಕರ ವೇದಿಕೆಯಲ್ಲಿ ನಡೆದ ಕೆಂಪೇಗೌಡ ಜಯಂತಿ
ಕನಕಪುರ ನಗರದ ತಾಲ್ಲೂಕು ಕ್ರೀಡಾಂಗಣದ ಹಿಂಭಾಗದಲ್ಲಿನ ಅರಳಿಕಟ್ಟೆ ಹಿರಿಯ ನಾಗರೀಕರ ವೇದಿಕೆಯಲ್ಲಿ ನಡೆದ ಕೆಂಪೇಗೌಡ ಜಯಂತಿ   

ಕನಕಪುರ: ‘ಕೆಂಪೇಗೌಡರು ಬೆಂಗಳೂರು ನಿರ್ಮಾಣದಲ್ಲಿ ತೋರಿದ ದೂರದರ್ಶಿತ್ವ, ಆಲೋಚನೆಗಳು ನಮಗೆಲ್ಲಾ ಮಾದರಿ’ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಿ.ಪಿ.ಕಾಡೇಗೌಡ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದ ಹಿಂಬದಿಯಲ್ಲಿರುವ ಅರಳಿಕಟ್ಟೆ ಹಿರಿಯ ನಾಗರೀಕರ ವೇದಿಕೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಐದು ಶತಮಾನಗಳ ಹಿಂದೆಯೇ ಮುಂದೆ ನಗರ ಇದೇ ರೀತಿ ಇರಬೇಕೆಂಬ ಪರಿಕಲ್ಪನೆಯಿಂದ ಕೆಂಪೇಗೌಡರು ಬೆಂಗಳೂರು ನಿರ್ಮಿಸಿದರು.ಸರ್ವ ಜನಾಂಗವನ್ನು ಸಮಾನವಾಗಿ ಕಂಡು ಅವರವರ ಕಸುಬಿಗೆ ತಕ್ಕಂತೆ ಪೇಟೆಗಳನ್ನು ನಿರ್ಮಿಸಿ ಎಲ್ಲಾ ಕುಲ ಕಸುಬುಗಳನ್ನು ಪ್ರೋತ್ಸಾಹಿಸಿದರು.ಗುಡಿ, ಗೋಪುರ, ದೇವಾಲಯಗಳನ್ನು ನಿರ್ಮಿಸಿ, ಕೆರೆಗಳನ್ನು ಅಭಿವೃದ್ಧಿ ಪಡಿಸಿದರು. ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಿದ್ದ ಗಡಿ ಗೋಪುರಗಳನ್ನು ಮೀರಿ ಇಂದು ಬೆಂಗಳೂರು ಬೆಳೆದಿದೆ. ಇಡೀ ವಿಶ್ವದಲ್ಲೇ ಸಿಲಿಕಾನ್‌ ಸಿಟಿಯಾಗಿ ಕರ್ನಾಟಕ ರಾಜಧಾನಿಯಾಗಿ ರಾರಾಜಿಸುತ್ತಿದೆ’ ಎಂದರು.

ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪೇಗೌಡ ಬಸ್‌ ನಿಲ್ದಾಣ, ಕೆಂಪೇಗೌಡ ಮೆಟ್ರೊ ನಿಲ್ದಾಣ, ಕೆಂಪೇಗೌಡ ನಗರ ಇವು ಅವರ ಹೆಸರನ್ನು ಚಿರಸ್ಥಾಯಿಗೊಳಿಸಿವೆ’ ಎಂದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಡಾ. ಕೂ.ಗಿ.ಗಿರಿಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಜಾನಪದ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಎಂ.ಚಂದ್ರ ಉಪನ್ಯಾಸ ನೀಡಿದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಚೀಲೂರು ಮುನಿರಾಜು ಅಧ್ಯಕ್ಷತೆ ವಹಿಸಿದ್ದರು.

ಗಾಯಕರಾದ ಬರಗೂರು ಪುಟ್ಟರಾಜು, ಮನೋಹರ ಪಿ., ಸಿದ್ದರಾಜಯ್ಯ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಆಕಾಶವಾಣಿ ಕಲಾವಿದ ಚಿಕ್ಕಮರೀಗೌಡ, ಅರಳಿಕಟ್ಟೆ ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ಲಕ್ಷ್ಮೀಕಾಂತ, ಜಿಲ್ಲಾ ಲೇಖಕರ ವೇದಿಕೆ ಸದಸ್ಯೆ ಟಿ.ಎಂ.ಕಮಲಾಕ್ಷಿ, ಕನ್ನಡಾಂಬೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಅಸ್ಗರ್‌ಖಾನ್‌, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಅಂಗಡಿ ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.