ADVERTISEMENT

ಕೇರಳದ ಯುವತಿ ಮೇಲೆ ಅತ್ಯಾಚಾರ: ಬಂಧನ

ಇಂಟರ್ನ್‌ಶಿಪ್‌ಗಾಗಿ ನಗರಕ್ಕೆ ಬಂದಿದ್ದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 19:38 IST
Last Updated 26 ಡಿಸೆಂಬರ್ 2018, 19:38 IST

ಬೆಂಗಳೂರು: ಇಂಟರ್ನ್‌ಶಿಪ್‌ಗಾಗಿ ನಗರಕ್ಕೆ ಬಂದಿದ್ದ ಕೇರಳದ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದಡಿ ಹೋಟೆಲ್‌ ನೌಕರನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

‘ಅಸ್ಸಾಂನ ಹಯಾನ್ ಡೈಮೇರಿ ಅಲಿಯಾಸ್ ಬಬುಲ್ ಎಂಬಾತನನ್ನು ಬಂಧಿಸಿ, ‌ನ್ಯಾಯಾಧೀಶರ ಸೂಚನೆಯಂತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ. ಈತ ರಿಚ್ಮಂಡ್ ರಸ್ತೆಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಬೈನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ನಾನು, ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದುಹೋಟೆಲ್‌ಗೆ ತರಬೇತಿಗೆ ಹೋಗುತ್ತಿದ್ದೆ. ಅಲ್ಲಿ ಹಯಾನ್ ಡೈಮೇರಿಯ ಪರಿಚಯವಾಯಿತು. ಇತ್ತೀಚೆಗೆ ಆಸ್ಟಿನ್‌ ಟೌನ್‌ನ ತನ್ನ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದ ಆತ, ನನ್ನನ್ನೂ ಆಹ್ವಾನಿಸಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಆ ದಿನ ರಾತ್ರಿ ಆತ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ತಡರಾತ್ರಿವರೆಗೂ ಪಾರ್ಟಿ ನಡೆದಿದ್ದರಿಂದ ನನಗೆ ಅಲ್ಲೇ ಉಳಿದುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದ. ಸುಸ್ತಾಗಿದ್ದರಿಂದ ತಕ್ಷಣನಿದ್ರೆಗೆ ಜಾರಿದ್ದೆ. ಆದರೆ, ರಾತ್ರಿ 1.30ರ ಸುಮಾರಿಗೆ ಹಯಾನ್ ನನ್ನ ಕೊಠಡಿಗೆ ಬಂದಿದ್ದ. ಕೂಡಲೇ ಎಚ್ಚರಗೊಂಡು ಚೀರಿಕೊಳ್ಳಲಾರಂಭಿಸಿದೆ. ಆಗ ರಕ್ತ ಬರುವಂತೆ ಕುತ್ತಿಗೆ ಕಚ್ಚಿದ ಆತ, ಕೂಗಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ.ನಂತರ ಅತ್ಯಾಚಾರವೆಸಗಿ ಮನೆಯಿಂದ ಹೊರಹೋದ. ತಕ್ಷಣ ಗೆಳತಿಗೆ ಕರೆ ಮಾಡಿ, ವಿಷಯ ತಿಳಿಸಿ 3 ಗಂಟೆ ಸುಮಾರಿಗೆ ಕ್ಯಾಬ್‌ನಲ್ಲಿ ಮನೆಗೆ ಹೊರಟೆ.’

‘ರಾಜ್ಯಕ್ಕೆ ವಾಪಸಾಗಿ ಅಲ್ಲಿನಸ್ನೇಹಿತರ ಬಳಿಯೂ ಅಳಲು ತೋಡಿಕೊಂಡೆ. ಕೊನೆಗೆ ಅವರ ಸಲಹೆ ಮೇರೆಗೆ ದೂರು ಕೊಟ್ಟಿದ್ದೇನೆ. ನಂಬಿಕೆ ದ್ರೋಹವೆಸಗಿದ ಹಯಾನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದರು.

ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ನಗರದ ಹೊರವಲಯದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.