ADVERTISEMENT

ದೊಡ್ಡಬಳ್ಳಾಪುರ | ನರೇಗಾ ಹೆಸರು ಬದಲಾವಣೆಯಿಂದ ಮೋದಿಗೆ ಕಳಂಕ: ಕೆ.ಎಚ್‌.ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:55 IST
Last Updated 22 ಡಿಸೆಂಬರ್ 2025, 2:55 IST
ಕೆ.ಎಚ್‌. ಮುನಿಯಪ್ಪ
ಕೆ.ಎಚ್‌. ಮುನಿಯಪ್ಪ   

ದೊಡ್ಡಬಳ್ಳಾಪುರ: ದೇಶದ ಬಡವರು, ತುಳಿತಕ್ಕೆ ಒಳಗಾದವರ ಜೀವನ ಸುಧಾರಣೆಗಾಗಿ ಕೇಂದ್ರದಲ್ಲಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಹೆಸರನ್ನು ಬದಲಾಯಿಸಿದ್ದು, ಮನಸ್ಸಿಗೆ ತೀವ್ರ ಬೇಸರ ತರಿಸಿದೆ. ಇದರಿಂದ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ಕಳಂಕವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದ ಸಿದ್ದೇನಾಯಕನಹಳ್ಳಿಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಸ್ನೇಹದ ಬಳಗದ ಸ್ಥಾಪಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

‘ರಾಷ್ಟ್ರಪೀತ ಮಹಾತ್ಮಗಾಂಧೀಜಿ ಅವರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಇಂತಹ ಮಹಾತ್ಮರ ಹೆಸರಿನಲ್ಲಿ ಆರಂಭಿಸಲಾಗಿದ್ದ ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಹೆಸರನ್ನು ಜಿ ರಾಮ್‌ ಜೀ ಎಂದು ಮರು ನಾಮಕರಣ ಮಾಡಿರುವುದು ಸರಿಯಲ್ಲ. ನಾನು ಪ್ರತಿ ದಿನವು ರಾಮಕೋಟಿ ಬರೆಯುತ್ತೇನೆ. ಆದರೆ ರಾಮನ ಹೆಸರು ಹೇಳಿಕೊಂಡು ಮತ ಕೇಳುವುದಿಲ್ಲ. ರಾಮ ಎಲ್ಲರ ಮನಸ್ಸಿನಲ್ಲಿ ನೆಲೆಸಿರುವ ದೇವರು. ಆದರೆ ಬಿಜೆಪಿಯವರು ದೇವರನ್ನು ಬಳಸಿಕೊಂಡು ಮತ ಕೇಳಲು ಹೋಗುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ADVERTISEMENT

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಈ ದೇಶದ ಶೋಷಿತರ, ತುಳಿತಕ್ಕೆ ಒಳಗಾದವರ ದ್ವನಿಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ದೇಶಕ್ಕೆ ನೀಡಿರುವ ಸಂವಿಧಾನ ನಮ್ಮೆಲ್ಲರ ಬದುಕಿನ ಆಧಾರ ಸ್ತಂಭವಾಗಿದೆ ಎಂದರು.

ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಆಗಿದ್ದರೆ ಅಂತಹವರು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ ಮತ್ತೆ ಬಿಪಿಎಲ್‌ ಕಾರ್ಡ್‌ಗಳಾಗಿಸುವ ಅಧಿಕಾರವನ್ನು ತಹಶೀಲ್ದಾರ್‌ ಅವರಿಗೆ ನೀಡಲಾಗಿದೆ ಎಂದರು.

ಮಾಜಿ ಶಾಸಕ ಟಿ.ವೆಂಕಟರಮಣಯ್ಯ,ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಚುಂಚೇಗೌಡ, ಮುಖಂಡರಾದ ಎನ್‌.ರಂಗಪ್ಪ, ರಾಮಕೃಷ್ಣ, ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದ ಅಧ್ಯಕ್ಷ ಎಸ್‌.ಜಿ. ನರೇಶ್, ಗೌರವ ಅಧ್ಯಕ್ಷ ಎಂ.ಮುನಿಯಪ್ಪ, ಉಪಾಧ್ಯಕ್ಷ ಎಸ್.ಎನ್. ರಘು, ಆರ್‌.ಮುನಿರಾಜು, ಎಂ.ಲೋಕೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಸುಬ್ರಮಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.