ADVERTISEMENT

ಆನೇಕಲ್: ಅಹೋರಾತ್ರಿ ಧರಣಿಯಲ್ಲಿ ನೇಗಿಲು, ಲಕ್ಷ್ಮಿಪೂಜೆ

ಪ್ರತಿಭಟನೆಯಲ್ಲಿ ಭಕ್ತಿಗೀತೆ, ಭಜನೆ ಗಾಯನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 1:53 IST
Last Updated 10 ಆಗಸ್ಟ್ 2025, 1:53 IST
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯ ಸ್ಥಳದಲ್ಲಿ ರೈತರು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯ ಸ್ಥಳದಲ್ಲಿ ರೈತರು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು   

ಆನೇಕಲ್: ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಶುಕ್ರವಾರ ರೈತರು ಮತ್ತು ರೈತ ಮಹಿಳೆಯರು ಒಗ್ಗೂಡಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು.

ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ 32 ದಿನದಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಜೆ ರೈತ ಮಹಿಳೆಯರು ಒಗ್ಗೂಡಿ ಲಕ್ಷ್ಮಿ ದೇವಿ ಮೂರ್ತಿ ಸ್ಥಾಪಿಸಿ ಪೂಜಿಸಿದರು.

ಭಾಗ್ಯದ ಲಕ್ಷ್ಮೀ ಬಾರಮ್ಮ... ಸೇರಿದಂತೆ ಭಕ್ತಿಗೀತೆಗಳು ಮತ್ತು ಭಜನೆ ಹಾಡುವ ಮೂಲಕ ರೈತರು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದರು. ಲಕ್ಷ್ಮೀ ದೇವಿಯ ಕಲಶದೊಂದಿಗೆ ನೇಗಿಲು ಇಟ್ಟು ಪೂಜೆ ಮಾಡಿದ್ದು ವಿಶೇಷವಾಗಿತ್ತು.

ADVERTISEMENT

ಕೆಐಎಡಿಬಿಯು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವವರೆಗೂ ಹೋರಾಟ ಮುಂದುವರೆಯಲಿದೆ. ವರಮಹಾಲಕ್ಷ್ಮೀ ಹಬ್ಬವನ್ನು ಇಲ್ಲಿಯೇ ಆಚರಿಸಿದ್ದೇವೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಡದಿದ್ದಲ್ಲಿ ಗೌರಿ ಗಣೇಶ, ದೀಪಾವಳಿ ಹಬ್ಬವನ್ನು ಇಲ್ಲಿಯೇ ಆಚರಿಸಲಾಗುವುದು ಎಂದು ರೈತ ಮಹಿಳೆ ಪುಷ್ಪಮ್ಮ ಎಚ್ಚರಿಕೆ ನೀಡಿದರು.

ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಹೋರಾಟದ ಕಿಚ್ಚು ದಿನೇ ದಿನೇ ಹೆಚ್ಚಾಗುತ್ತಿದೆ. ಮುತ್ತಾನಲ್ಲೂರು, ಹಂದೇನಹಳ್ಳಿ ಗ್ರಾಮಗಳಲ್ಲಿ ರೈತರು ಪ್ರತ್ಯೇಕವಾಗಿ ಅಹೋರಾತ್ರಿ ಧರಣಿ ಆರಂಭಿಸಿ ಕೆಐಎಡಿಬಿ ವಿರುದ್ಧ ಧ್ವನಿ ಎತ್ತಿದ್ದಾರೆ.

ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ರೈತರಿಗೆ ಕೃಷಿಯ ಜೀವನ ಕೃಷಿಯೇ ಅಸ್ತಿತ್ವ. ಹಾಗಾಗಿ ಸರ್ಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು.
–ಪುಷ್ಪಮ್ಮ, ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.