ದೇವನಹಳ್ಳಿ: ‘ರಾಜ್ಯದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಗುರಿಯನ್ನು ಮೀರಿ 16 ಕೋಟಿ ಮಾನವ ದಿನಗಳ ಗುರಿ ತಲುಪಲು ಹಲವಾರು ಮಹಿಳಾ ಕೆಲಸಗಾರರು ಶ್ರಮಿಸಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದಲ್ಲಿ ನವ ಭಾರತದ ನಾರಿ ಯೋಜನೆಯಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಕಾಯಕ ಬಂಧುಗಳಿಗೆ ಗೌರವ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾದ ಕೆಲಸಗಳಿಂದ ರಾಜ್ಯಕ್ಕೆ ₹ 289 ಕೋಟಿ ಸ್ಥಿರಾಸ್ತಿ ಸೃಷ್ಟಿಯಾಗಿದೆ. ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸಿದ ಕಾಯಕಯೋಗಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.
ಕೆರೆ, ಕಟ್ಟೆ ತುಂಬಿಸುವುದು, ಏರಿಗಳ ನಿರ್ಮಾಣ, ಗೋಕಟ್ಟೆ, ಕಲ್ಯಾಣಿ ಸ್ವಚ್ಛತೆ ಹಾಗೂ ಪುನರ್ ನಿರ್ಮಾಣ, ಮಳೆ ನೀರು ಭೂಮಿಯಲ್ಲಿ ಇಂಗಲು ಅನುವಾಗುವಂತೆ ಇಂಗು ಗುಂಡಿಗಳ ನಿರ್ಮಾಣ, ರೈತರ ಭೂಮಿಯ ಅಭಿವೃದ್ಧಿಗಾಗಿ ಬದುಗಳ ನಿರ್ಮಾಣ ಸೇರಿದಂತೆ ಮತ್ತಿತರ ಅಭಿವೃದ್ಧಿ ಚಟುವಟಿಕೆಗಳನ್ನು ನರೇಗಾದಡಿ ಕೈಗೊಳ್ಳಲಾಗಿದೆ. ಉತ್ಪಾದಕತೆಯತ್ತ ಸಾಗಿ ಪ್ರತಿಯೊಬ್ಬ ಸಣ್ಣ ರೈತರಿಗೂ ಮಹಿಳೆಯರು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸುವಲ್ಲಿ ಕ್ರಿಯಾಶೀಲವಾಗಿ ಅತ್ಯುತ್ತಮ ಪಾತ್ರವಹಿಸಿದ ರಾಜ್ಯದ ಎಲ್ಲಾ ಜಿಲ್ಲೆಯಗಳಿಂದ ಆಯ್ದ 75 ಮಹಿಳಾ ಮೇಟ್‌ಗಳನ್ನು ಸನ್ಮಾನಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಆಯುಕ್ತೆ ಶಿಲ್ಪಾನಾಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ರೇವಣಪ್ಪ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಾಣೇಶ್ ರಾವ್, ದೇವನಹಳ್ಳಿ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ. ವಸಂತ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.