ADVERTISEMENT

ದೇವನಹಳ್ಳಿ: ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಖಾಸಗಿ ಕಂಪನಿಗಳ ಟ್ಯಾಕ್ಸಿಗಳಿಗೆ ಅವಕಾಶ l ವಿಮಾನ ನಿಲ್ದಾಣ ಪ್ರಾಧಿಕಾರದ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 21:35 IST
Last Updated 3 ಜನವರಿ 2023, 21:35 IST
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಟ್ಯಾಕ್ಸಿಗಳನ್ನು ಕಡೆಗಣಿಸಿ ಖಾಸಗಿ ಕಂಪನಿಗಳ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿ ಟ್ಯಾಕ್ಸಿ ಮಾಲೀಕರು, ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಕಾರು ಚಾಲಕರು ಮಂಗಳವಾರ ವಿಮಾನ ನಿಲ್ದಾಣ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘2008 ರಿಂದಲೂ ಟ್ಯಾಕ್ಸಿ ಸೇವೆ ನೀಡುತ್ತಿದ್ದೇವೆ. ಆದರೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಸಿಬ್ಬಂದಿ ಆ್ಯಪ್ ಆಧಾರಿತ ಓಲಾ, ಊಬರ್‌ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತಿದ್ದಾರೆ. ಜತೆಗೆ ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಚಾಲಕರ ಸಂಘಟನೆ ಅಧ್ಯಕ್ಷ ರಮೇಶ್‌ ಗೌಡ ಆರೋಪಿಸಿದರು.

ವಿಮಾನ ನಿಲ್ದಾಣದಲ್ಲಿದ್ದ ಕೌಂಟರ್‌ ಬಂದ್:ರಾಜ್ಯ ಪ್ರವಾಸೋದ್ಯಮ ಮಾಹಿತಿ ನೀಡಲು ವಿಮಾನ ನಿಲ್ದಾಣದಲ್ಲಿ ಕೌಂಟರ್ ತೆರೆಯಲಾಗಿತ್ತು. ಈಗ ಆ ಕೌಂಟರ್ ಬಂದ್ ಮಾಡಲಾಗಿದೆ. ಇದರಿಂದ ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರಿಗೆ ನಷ್ಟವಾಗಿದೆ ಎಂದು ಚಾಲಕ ಧರ್ಮೇಂದ್ರ ಡಿ.ಆರ್. ದೂರಿದರು.

ADVERTISEMENT

‘ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಡಿಜಿಟಲ್‌ ಫೇರ್‌ ಮೀಟರ್‌ ಅಳವಡಿಸಿಕೊಂಡು, ನ್ಯಾಯಯುತವಾಗಿ ಬಾಡಿಗೆ ಪಡೆಯುತ್ತಿದ್ದೇವೆ. ಓಲಾ, ಊಬರ್ ರೀತಿ ಗಂಟೆಗೊಂದು ದರ ನಮ್ಮಲ್ಲಿ ಇಲ್ಲ’ ಎಂದರು.

ಕಾನೂನು ಬಾಹಿರ ಕಾರ್ಯಾಚರಣೆ: ‘ಓಲಾ ಮತ್ತು ಊಬರ್‌ನವರ ಟ್ಯಾಕ್ಸಿ ಅಗ್ರಿಗೇಟರ್‌ ಪರವಾನಗಿ ಮುಕ್ತಾಯವಾಗಿದ್ದರೂ ವಿಮಾನ ನಿಲ್ದಾಣದ ಲ್ಯಾಂಡ್‌ ಸೈಡ್‌ ಮುಖ್ಯಸ್ಥರಾದ ವಿಶಾಲ್‌, ಸಂಜಯ್‌ ಚಂದ್ರ, ಮುಕೇಶ್‌ ಮತ್ತು ಗಜೇಂದ್ರ ಕಾನೂನು ಬಾಹಿರವಾಗಿ ಖಾಸಗಿ ಕಾರುಗಳ ಕಾರ್ಯಾಚರಣೆಗೆ ಅವಕಾಶ ನೀಡಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ’ ಎಂದು ಕೆಂ.ಅಂ.ವಿ ಟ್ಯಾಕ್ಸಿ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ್‌ ಆರೋಪಿಸಿದರು.

ಕಿರುಕುಳ:ಚಾಲಕರ ಹಕ್ಕುಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದರೆ, ಸುಖಾಸುಮ್ಮನೆ ದಂಡ ವಿಧಿಸುವುದು, ಪ್ರಯಾಣಿಕರು ಇದ್ದರೂ ಅವರಿಗೆ ಟ್ಯಾಕ್ಸಿ ದೊರೆಯದಂತೆ ಮಾಡುವುದು. ವೈಯಕ್ತಿಕವಾಗಿ ಟ್ರಿಪ್‌ ಮಾಡುತ್ತಿದ್ದೀರಿ ಎಂದು ಆರೋಪಿಸಿ ಟ್ಯಾಕ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಅಧಿಕಾರಿಗಳ ವರ್ತನೆಯಿಂದ ಒಂಬತ್ತು ಚಾಲಕರು ಹೃದಯಾಘಾತದಿಂದ ಮೃತರಾಗಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಚಾಲಕರು ದೂರಿದರು.

ಕೆಎಸ್‌ಟಿಡಿಸಿ ಉಳಿಸಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲಕರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ‘ವಿಮಾನ ನಿಲ್ದಾಣ ಅಧಿಕಾರಿಗಳು ಚಾಲಕರ ಕ್ಷೇಮಾಭಿವೃದ್ಧಿಗೆ ಸಹಕರಿಸುವಂತಹ ನಿರ್ಧಾರ ಕೈಗೊಳ್ಳಬೇಕು. ತ್ವರಿತವಾಗಿ ಪ್ರವಾಸೋದ್ಯಮ ಇಲಾಖೆ ಟ್ಯಾಕ್ಸಿಗಳಿಗೆ ಮೊದಲ ಆದ್ಯತೆಯಲ್ಲಿ ಟ್ರಿಪ್‌ ನೀಡಬೇಕು. ವಿಮಾನ ನಿಲ್ದಾಣ ಪ್ರಾರಂಭದ ದಿನಗಳಿಂದ ಇರುವವರನ್ನು ಒಕ್ಕಲೆಬ್ಬಿಸುವ ಕೆಲಸ ಸಲ್ಲದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಲಾಬಿ: ಕೃತಕ ಅಭಾವ ಸೃಷ್ಟಿ

ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಅಭಾವವಿದೆ ಎಂದು ಸರ್ಕಾರ ಹಾಗೂ ಪ್ರಾಧಿಕಾರಗಳಿಗೆ ಸುಳ್ಳು ವರದಿ ನೀಡಿ ಖಾಸಗಿ ಕಂಪನಿಗಳಿಂದ ಹೆಚ್ಚುವರಿ
ಟ್ಯಾಕ್ಸಿ ಸೇವೆ ಒದಗಿಸಲು ದೊಡ್ಡ ಮಟ್ಟದಲ್ಲಿ ಷ್ಯಡಂತ್ರ ರೂಪಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ನಿಲ್ದಾಣದಿಂದ ಕೆಎಸ್‌ಟಿಡಿಸಿ ನಿತ್ಯ 3,000 ಟ್ರಿಪ್‌ ಟ್ಯಾಕ್ಸಿ ಓಡಿಸುತ್ತಿದೆ. ಪ್ರತಿ ತಿಂಗಳೂ ₹50 ಲಕ್ಷಕ್ಕಿಂತ ಅಧಿಕ ಶುಲ್ಕವನ್ನು ವಿಮಾನ ನಿಲ್ದಾಣ ಪಡೆಯುತ್ತಿದೆ.

ಒಟ್ಟಿನಲ್ಲಿ ಕೆಎಸ್‌ಟಿಡಿಸಿ ಟ್ಯಾಕ್ಸಿ ಸೇವೆಯನ್ನು ಪೂರ್ತಿಯಾಗಿ ಸ್ಥಗಿತ ಮಾಡಲು ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಲಾಬಿ ಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಖಾಸಗಿ ಕಂಪನಿ ಪಾಲಾದ ಪಾರ್ಕಿಂಗ್‌

2008ರಲ್ಲಿ ಕೆಎಸ್‌ಟಿಡಿಸಿ ಕಾರುಗಳ ಪಾರ್ಕಿಂಗ್‌ಗೆ 400 ವಾಹನ ನಿಲ್ಲಿಸುವಷ್ಟು ಜಾಗ ಕಲ್ಪಿಸಲಾಗಿತ್ತು. ಆದರೆ, ಈಗ ಕೇವಲ 30 ಕಾರು ನಿಲುಗಡೆಗಷ್ಟೇ ಜಾಗ ಉಳಿದಿದೆ. ಈ ಜಾಗದಲ್ಲಿ ಕೆಎಸ್‌ಟಿಡಿಸಿ ಬಿಟ್ಟಿಯಾಗಿ ಕಾರು ನಿಲ್ಲಿಸುವುದಿಲ್ಲ. ಪ್ರತಿ ಟ್ರಿಪ್‌ಗೆ ₹120ರಂತೆ ವಿಮಾನ ನಿಲ್ದಾಣ ಶುಲ್ಕ ಪಾವತಿಸುತ್ತೇವೆ. ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ಖಾಸಗಿ ಕಂಪನಿಗಳಿಗೆ ಹೆಚ್ಚು ಪಾರ್ಕಿಂಗ್ ಸ್ಥಳವಕಾಶ ಕಲ್ಪಿಸಲಾಗಿದ್ದು, ಸರ್ಕಾರಿ ಪ್ರಾಯೋಜಿತ ಕಾರುಗಳಿಗೆ ಅನ್ಯಾಯವೆಸಗಲಾಗುತ್ತಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.