
ದೊಡ್ಡಬಳ್ಳಾಪುರ: ಕನ್ನಡದ ಅಸ್ಮಿತೆಯನ್ನು ಕನ್ನಡ ಸಾಹಿತ್ಯ ಮತ್ತು ಚಿಂತನೆಯ ಮೂಲಕ ಜಾಗತಿಕ ಮನ್ನಣೆಗೊಳಿಸಿದವರು ಕುವೆಂಪು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಹೇಳಿದರು.
ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ನಡೆದ ವಿಶ್ವ ಮಾನವ ದಿನಾಚರಣೆಯಲ್ಲಿ ಮಾತನಾಡಿದರು.
ಕುವೆಂಪು ಸಾಹಿತ್ಯದ ಮೂಲ ಆಶಯ ವಿಶ್ವಮಾನವ ಸಂದೇಶ ಆಗಿದೆ. ವೈಚಾರಿಕ ಪ್ರಜ್ಞೆ, ಪ್ರಕೃತಿ ಪ್ರೀತಿ, ಆಧುನಿಕ ಚಿಂತನೆ ಮತ್ತು ಸಾಮಾಜಿಕ ಸಮಾನತೆ ವಿಚಾರಗಳನ್ನು ತಮ್ಮ ಸಾಹಿತ್ಯದ ಮೂಲಕ ನೀಡಿದವರು. ಸಮಾಜದ ಕಟ್ಟಕಡೆಯ ಜನ ಸಾಮಾನ್ಯನಿಗೂ ನ್ಯಾಯ ಒದಗಿಸುವ ಆಶಯ ಕುವೆಂಪು ಸಾಹಿತ್ಯದಲ್ಲಿದೆ ಎಂದರು.
ಹಿರಿಯ ಸಾಹಿತಿ ಶರಣಯ್ಯ ಹಿರೇಮಠ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ಸಂದೇಶದ ಮೂಲ ತತ್ತ್ವಗಳು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ. ಇವುಗಳು ಜಗತ್ತಿನ ಮನುಷ್ಯರನ್ನು ಜಾತಿ, ಮತ, ಭಾಷೆ, ದೇಶಗಳ ಗಡಿಗಳನ್ನು ಮೀರಿ ವಿಶ್ವಮಾನವರಾಗಿ ಒಂದಾಗಿ ಕಾಣುವ ಮತ್ತು ಸಮಷ್ಟಿ ಕಲ್ಯಾಣದ ದೃಷ್ಟಿಯನ್ನು ಪ್ರತಿಪಾದಿಸುತ್ತವೆ ಎಂದರು.
ಲಾವಣ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿಶ್ವಾಸ್ ಹನುಮಂತೇಗೌಡ ಮಾತನಾಡಿ, ಕನ್ನಡ ಭಾಷೆ, ನಾಡು, ಸಂಸ್ಕೃತಿಗೆ ಕುವೆಂಪು ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದು, ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಲು ಶ್ರಮಿಸಿದ ರಾಷ್ಟ್ರಕವಿ ಕುವೆಂಪು ಆಗಿದ್ದಾರೆ ಎಂದರು.
ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಸಾಹಿತಿ ಶರಣಯ್ಯ ಹಿರೇಮಠ, ರೈತ ಮುಖಂಡ ವಿನೋದ್‌ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಡಾ.ಮುನಿರಾಜು, ದೇವರಾಜು, ಸಂಪತಕುಮಾರ್, ಸಿ.ಪಿ.ಎನ್.ರೆಡ್ಡಿ, ವೆಂಕಟರಾಜು, ಕೆ.ಮಹಾಲಿಂಗಯ್ಯ, ನಾಗರತ್ನಮ್ಮ, ಮಜರಾಹೊಸಹಳ್ಳಿ ಕೇಶವಮೂರ್ತಿ, ಕೆ.ವಿ.ವೆಂಕಟೇಶರೆಡ್ಡಿ, ಪಿ.ಗೋವಿಂದರಾಜು, ಡಿ.ಶ್ರೀಕಾಂತ್, ಎ.ಜಯರಾಮ್, ಜಿ.ಸುರೇಶ್, ದರ್ಗಾಜೋಗಿಹಳ್ಳಿ ಮಲ್ಲೇಶ್, ಸೆಲ್ವಂರಾಜು, ಸಫೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.