ಆನೇಕಲ್: ತಾಲ್ಲೂಕಿಗೆ ಯಾವುದೇ ಜಲಮೂಲಗಳಿಲ್ಲದೆ ಕೊಳವೆ ಬಾವಿ ಆಶ್ರಯಿಸಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದ್ದು, ತಾಲ್ಲೂಕಿನ ಬಹುತೇಕ ಕೆರೆಗಳಿಗೆ ಕೈಗಾರಿಕೆಗಳ ತ್ಯಾಜ್ಯ ನೀರು ಸೇರುತ್ತಿದ್ದು, ಕೆರೆ ನೀರು ಮಲಿನವಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತಗೊಂಡಿದೆ.
ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಕೆರೆಗಳಿವೆ. ಬಹುತೇಕ ದೊಡ್ಡದಾದ ಕೆರೆಗಳು ಕೈಗಾರಿಕೆಗಳ ತ್ಯಾಜ್ಯದಿಂದ ಕೂಡಿವೆ. ಹೆನ್ನಾಗರ, ಮುತ್ತಾನಲ್ಲೂರು, ಚಂದಾಪುರ ಕೆರೆಗೆ ಕೈಗಾರಿಕೆ ದ್ರವ ತ್ಯಾಜ್ಯ ನಿರಂತರವಾಗಿ ಹರಿಯುತ್ತಿದೆ. ಇದರ ವಿರುದ್ಧ ಹಲವು ಹೋರಾಟಗಳು ನಡೆದರೂ ಸರ್ಕಾರ ಮತ್ತು ಸ್ಥಳೀಯ ಆಡಳಿತದಿಂದ ಯಾವ ಸ್ಪಂದನೆ ದೊರೆತಿಲ್ಲ.
ಹೆನ್ನಾಗರ ಕೆರೆಯು ಬೆಂಗಳೂರು ನಗರ ಜಿಲ್ಲೆಗಳಲ್ಲಿಯೇ ದೊಡ್ಡ ಕೆರೆಯಾಗಿದೆ. ಬೊಮ್ಮಸಂದ್ರ, ಜಿಗಣಿ ಕೈಗಾರಿಕೆಗಳ ತ್ಯಾಜ್ಯದಿಂದ ಕೆರೆ ನೀರಿನ ಬಣ್ಣವೇ ಬದಲಾಗಿದೆ. ಚಂದಾಪುರ ಕೆರೆಯ ಅಸ್ತಿತ್ವವೇ ಬದಲಾಗಿದೆ. ಕೆರೆಗಳಿಗೆ ಕೈಗಾರಿಕೆ ಕೊಳಚೆ ಹರಿಯುವುದರ ವಿರುದ್ಧ ಎನ್‌ಜಿಟಿ ಹಲವು ಬಾರಿ ದಂಡ ವಿಧಿಸಿ, ಕೆರೆ ಸಂರಕ್ಷಣೆಗೆ ಆದೇಶ ನೀಡಿದ್ದರೂ, ಯಾವುದೇ ಕಿಮತ್ತು ಸಿಕ್ಕಿಲ್ಲ. ಕೆರೆಯ ಸ್ವಚ್ಛತಾ ಕಾರ್ಯ ಅರ್ಧಕ್ಕೆ ನಿಂತಿದೆ. ಕೈಗಾರಿಕೆಗಳ ತ್ಯಾಜ್ಯ ಕೆರೆಗೆ ಹರಿಯುವುದು ನಿಂತಿಲ್ಲ.
ತಾಲ್ಲೂಕಿನ ಹಲವು ಕೆರೆಗಳನ್ನು ಕಂಪನಿಗಳು ಸಿಎಸ್‌ಆರ್ ನಿಧಿಯಿಂದ ಅಭಿವೃದ್ಧಿ ಪಡಿಸಿದೆ. ಸನ್‌ಸೇರಾ ಕಂಪನಿಯಿಂದ ಕ್ಯಾಲಸನಹಳ್ಳಿ ಮತ್ತು ಕಲ್ಲುಬಾಳು ಕೆರೆ, ಬಯೋಕಾನ್ ಕಂಪನಿಯಿಂದ ಹುಸ್ಕುರು ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಈ ಬಾರಿ ವಿಶ್ವ ಜಲ ದಿನವು ಆನೇಕಲ್ ತಾಲ್ಲೂಕಿನ ಕೆರೆಗಳ ಸ್ವಚ್ಛತೆಗೆ ದಾರಿದೀಪವಾಗಲಿ ಎಂಬುದು ಸಾರ್ವಜನಿಕರ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.