ADVERTISEMENT

ಗುಡಿಸಲು ಹಾಕಲು ಜನರ ಲಗ್ಗೆ

ದೇವನಹಳ್ಳಿ: ಬೊಮ್ಮವಾರ ಗ್ರಾಮದ ಬಳಿಯ ಗೋಮಾಳದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:41 IST
Last Updated 25 ಜುಲೈ 2020, 7:41 IST
ಗುಡಿಸಲು ಹಾಕುತ್ತಿರುವ ಜಾಗದಲ್ಲಿ ಸ್ಥಳೀಯ ಗ್ರಾಮಸ್ಥರು
ಗುಡಿಸಲು ಹಾಕುತ್ತಿರುವ ಜಾಗದಲ್ಲಿ ಸ್ಥಳೀಯ ಗ್ರಾಮಸ್ಥರು   

ದೇವನಹಳ್ಳಿ: ಇಲ್ಲಿನ ಬೊಮ್ಮವಾರ ಗ್ರಾಮದ ಬಳಿ ಇರುವ ಗೋಮಾಳದ ಖಾಲಿ ಜಮೀನಿನಲ್ಲಿ ಸ್ಥಳೀಯ ಗ್ರಾಮದ 400 ಕುಟುಂಬಗಳು ಏಕಕಾಲದಲ್ಲಿ ಗುಡಿಸಲು ಹಾಕಲು ಶುಕ್ರವಾರ ಲಗ್ಗೆ ಇಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ಬಿ.ಕೆ.ರಮೇಶ್, ‘ಬೊಮ್ಮವಾರ ಗ್ರಾಮಕ್ಕೆ ಹೊಂದಿಕೊಂಡಂತೆ ಸರ್ವೇ ನಂಬರ್‌ 36ರಲ್ಲಿ ನೂರಕ್ಕೂ ಹೆಚ್ಚು ಎಕರೆ ಸರ್ಕಾರಿ ಗೋಮಾಳದ ಜಾಗವನ್ನು ನೂರಾರು ವರ್ಷಗಳಿಂದ ಹಿರಿಯ ತಲೆಮಾರಿನವರು ಗ್ರಾಮದ ಸೊತ್ತಾಗಿ ಉಳಿಸಿಕೊಂಡು ಬಂದಿದ್ದಾರೆ. ಯಾರು ಉಳುಮೆಗೆ ಹೊದರೂ ಬಿಡುತ್ತಿರಲಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ಗೋಮಾಳ ಒತ್ತುವರಿ ಹೊರತುಪಡಿಸಿ 86 ಎಕರೆ ಜಾಗವಿತ್ತು. ಈ ಪೈಕಿ ವಾಜಪೇಯಿ ವಸತಿ ಶಾಲೆಗೆ ಹತ್ತು ಎಕರೆ, ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ, ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಒಂದೊಂದೇ ಇಲಾಖೆ ಜಾಗ ನೀಡಲಾಗಿದೆ’ ಎಂದು ಹೇಳಿದರು.

‘ಜಾಗ ವಿವಿಧ ಇಲಾಖೆಗೆ ಹಸ್ತಾಂತರಿಸುತ್ತಿರುವುದನ್ನು ಕಂಡು ಗ್ರಾಮಸ್ಥರೆಲ್ಲ ಸಭೆ ನಡೆಸಿ ನಾಲ್ಕಾರು ದಶಕಗಳಿಂದ ಕೂಡು ಕುಟುಂಬದಲ್ಲಿ ಇಕ್ಕಟ್ಟಿನ ಮನೆಯಲ್ಲಿ ಜೀವನ ನಡೆಸುತ್ತಿರುವ ಸ್ಥಳೀಯರಿಗೆ ನಿವೇಶನ ಅಗತ್ಯತೆಯನ್ನು ಮನಗಂಡು ಸಂಬಂಧಿಸಿದ
ಎಲ್ಲಾ ಇಲಾಖೆಗೆ ಮನವಿ ಸಲ್ಲಿಸಿ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಲಾಗಿತ್ತು’ ಎಂದು
ಹೇಳಿದರು.

ADVERTISEMENT

‘ಕಳೆದ ಆರೇಳು ವರ್ಷಗಳ ಹಿಂದೆ ಗ್ರಾಮದ ಪ್ರತಿ ಕುಟುಂಬಗಳಿಗೆ ಒಂದು ನಿವೇಶನದಂತೆ 400 ಕುಟುಂಬಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಯಿಂದ 9 ಎಕರೆ ಜಾಗ ಪಡೆದು ಗ್ರಾಮ ಪಂಚಾಯಿತಿಯಿಂದ ಅನುಮೊದನೆಯಾದ ನಂತರ ನಾಲ್ಕು ವರ್ಷ ಕಳೆದರೂ ಅರ್ಹರಿಗೆ ಹಕ್ಕುಪತ್ರ ಈವರೆಗೆ ನೀಡಿಲ್ಲ. ಬೇಸತ್ತ ಗ್ರಾಮಸ್ಥರು ಬೇರೆ ಮಾರ್ಗವಿಲ್ಲದೆ ತಮಗೆ ತೋಚಿದ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

‘ಸರ್ಕಾರಿ ಶಾಲೆಗೆ ಮತ್ತು ಆಟದ ಮೈದಾನಕ್ಕೆ ಜಾಗಬೇಕು. ಸಮುದಾಯ ಭವನ ಇರಬೇಕು. ಗ್ರಾಮಲೆಕ್ಕಿಗರಿಗೆ ಕಚೇರಿಗೆ ಜಾಗ ಬೇಕು. ಮನವಿ ಕೊಟ್ಟು ಸಾಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.