ದೇವನಹಳ್ಳಿ: ಸಾವಿರಕ್ಕೂ ಹೆಚ್ಚು ದಿನ ರೈತರು ನಡೆಸಿದ ಹೋರಾಟಕ್ಕೆ ಮಣಿದ ಸರ್ಕಾರವು ಭೂಸ್ವಾಧೀನದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ ಬಳಿಕವೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಧಿಕಾರಿಗಳು ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ನೋಟಿಸ್ ನೀಡಿದ್ದಾರೆ.
ಕೆಐಎಡಿಬಿ ಕೇಂದ್ರ ಕಚೇರಿಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಚನ್ನರಾಯಪಟ್ಟಣ ಹೋಬಳಿಯ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ಆ.29 ರಂದು ಜಮೀನು ದರ ನಿಗದಿಗಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಇದು ರೈತರಲ್ಲಿ ಆತಂಕ ಮೂಡಿಸುವ ಜೊತೆಗೆ ಗೊಂದಲಕ್ಕೂ ಕಾರಣವಾಗಿದೆ.
ಕೆಐಎಡಿಬಿ ಜಾರಿ ಮಾಡಿರುವ ನೋಟಿಸ್ ಖಂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ಸೋಮವಾರ ದೇವನಹಳ್ಳಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.
ರೈತರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 15ರಂದು ರೈತರೊಂದಿಗೆ ನಡೆಸಿದ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಆ.15ರಂದು ಪತ್ರಿಕೆಗಳಿಗೆ ಜಾಹೀರಾತು ಕೂಡ ನೀಡಿದ್ದರು. ಆದರೆ, ಕೆಐಎಡಿಬಿ ಅಧಿಕಾರಿಗಳು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
‘ರೈತರ ಭೂಮಿಯನ್ನು ರೈತರಿಗೆ ಉಳಿಸಿದ್ದೇವೆ’ ಎಂದು ಸರ್ಕಾರ ಜಾಹೀರಾತು ನೀಡಿ 15 ದಿನ ಕಳೆಯುವುದರ ಒಳಗೆ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ದರ ನಿಗದಿಗಾಗಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಜಾರಿಗೊಳಿಸಿರುವುದು ರೈತರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೂ ಕಾರಣವಾಗಿದೆ ಎಂದು ಹೋರಾಟಗಾರರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಇಡಿಬಿ ಭೂಸ್ವಾಧೀನ ಪ್ರಕ್ರಿಯೆಯಿಂದ ಬಿಡಿಸಿಕೊಳ್ಳಲು 13 ಹಳ್ಳಿಗಳು ರೈತರು ನಿರಂತರವಾಗಿ ಮೂರೂವರೆ ವರ್ಷ ಹೋರಾಟ ಮಾಡಿದ್ದೇವೆ ಎಂದರು.
ತಹಶೀಲ್ದಾರ್ ಅನೀಲ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಯಶವಂತ್, ಭೂಸ್ವಾಧೀನ ಕೈಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಘೋಷಿಸಿದ ಬಳಿಕವೂ ನೀವು ನೋಟಿಸ್ ಕೊಟ್ಟಿರುವುದು ಸರಿಯಲ್ಲ. ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು. ನಕಲಿ ಸಹಿ ಮಾಡಿ, ಭೂಮಿ ಕೊಡಲು ರೈತರ ಒಪ್ಪಿಗೆ ಇದೆ ಎಂದು ಪತ್ರ ಕೊಟ್ಟಿರುವವ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಆಗ್ರಹಿಸಿದರು.
ಸಚಿವರ ಜೊತೆ ಚರ್ಚೆ: ಕೆಐಎಡಿಬಿ ಸಿಇಒ
'ಸೆ.6 ರಂದು ದರ ನಿಗದಿ ಸಭೆಗೆ ಆಗಮಿಸುವಂತೆ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ಗ್ರಾಮಗಳ ರೈತರಿಗೆ ಕೆಐಎಡಿಬಿ ನೋಟಿಸ್ ಜಾರಿಗೊಳಿಸಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ದರ ನಿಗದಿ ಸಭೆ ರದ್ದುಗೊಳಿಸುವ ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ಸಚಿವರ ಗಮನಕ್ಕೆ ತರುತ್ತೇನೆ' ಎಂದು ಕೆಐಎಡಿಬಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹೇಶ್ ರೈತರಿಗೆ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.