ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಗೃಹ ಮಂಡಳಿಯು ದೊಡ್ಡಬೆಳವಂಗಳ ಹೋಬಳಿ ಕಸಾಘಟ್ಟ, ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ ಗ್ರಾಮಗಳ 2,760 ಎಕರೆ ಫಲವತ್ತಾದ ಕೃಷಿ ಭೂಸ್ವಾಧಿನಕ್ಕೆ ಸೆಪ್ಟೆಂಬರ್ 19ರಂದು ಸಭೆ ನಡೆಸಿರುವುದನ್ನು ಖಂಡಿಸಿ ಸೋಮವಾರ ದೊಡ್ಡಬೆಳವಂಗಲದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನ ಸಭೆಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರಾದ ಆರ್.ಚಂದ್ರತೇಜಸ್ವಿ, ಸಿ.ಎಚ್.ರಾಮಕೃಷ್ಣಯ್ಯ, ಪ್ರಭಾ ಬೆಳವಂಗಲ, ಕೆ.ಜಿ.ಗಂಗಚನಯ್ಯ, ಕೆ.ಸಿ.ಚೌಡಮೂರ್ತಿ, ಡಿ.ಬಿ.ರವಿಕುಮಾರ್, ಹರೀಶ್, ವಿಜಯ್ ಕುಮಾರ್, ಈಗಾಗಲೇ ದೊಡ್ಡಬೆಳವಂಗಲ ಹೋಬಳಿಯಲ್ಲಿ ಕ್ವಿನ್ ಸಿಟಿ, ಹೈಟೆಕ್ ಲಾಜಿಸ್ಟಿಕ್ ಪಾರ್ಕ್, ಬಿಬಿಎಂಪಿ ಕಸ ವಿಲೇವಾರಿ ಘಟಕ ಸೇರಿದಂತೆ ಹತ್ತಾರು ಯೋಜನೆಗಳ ನೆಪದಲ್ಲಿ ಸಾವಿರಾರು ಎಕರೆ ರೈತರ ಫಲವತ್ತಾದ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈಗ ಗೃಹ ಮಂಡಳಿ ನೆಪದಲ್ಲಿ 2,760 ಎಕರೆ ಕೃಷಿ ಜಮೀನು ಕಬಳಿಸಲು ಮುಂದಾಗಿರುವುದು ಖಂಡನೀಯ. ದೊಡ್ಡಬೆಳವಂಗಲ ಹೋಬಳಿಯ ರೈತರನ್ನು ಸಂಪೂರ್ಣವಾಗಿ ಒಕ್ಕಲೆಬ್ಬಿಸುವ ವ್ಯವಸ್ಥಿತಿ ಸಂಚು ನಡೆಯುತ್ತಿದೆ. ಇಲ್ಲಿವರೆಗೂ ಸ್ವಾಧೀನ ಮಾಡಿಕೊಂಡಿರುವ ಜಮೀನುಗಳಲ್ಲೇ ಇನ್ನೂ ಯಾವುದೇ ಕೆಲಸ ಪ್ರಾರಂಭವಾಗಿಲ್ಲ. ಆದರೆ, ಕೃಷಿ ಜಮೀನು ಸ್ವಾಧಿನ ಮಾತ್ರ ನಡೆಯುತ್ತಿದೆ. ಸರ್ಕಾರ ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ರೀಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ. ಕೃಷಿ ಜಮೀನು ಸ್ವಾಧೀನಕ್ಕೂ ಒಂದು ಮಿತಿ ಇರಬೇಕು. ಎಲ್ಲ ಯೋಜನೆಗಳನ್ನು ದೊಡ್ಡಬೆಳವಂಗಲ ಹೋಬಳಿಯಲ್ಲೇ ಜಾರಿಗೊಳೀಸುವ ಬದಲಿಗೆ ರಾಜ್ಯ ಇತರೆ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ಗೃಹ ಮಂಡಳಿಗೆ ಭೂಸ್ವಾಧೀನ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಇಲ್ಲಿ ಅವಕಾಶ ನೀಡುವುದಿಲ್ಲ. ತಾಲ್ಲೂಕಿನಲ್ಲೇ ಅತ್ಯಂತ ಹೆಚ್ಚು ಕೃಷಿ ಚಟುವಟಿಕೆ ನಡೆಯುತ್ತಿರುವ ಫಲವತ್ತಾದ ಜಮೀನು ಇರುವ ಸ್ಥಳದಲ್ಲಿ ಗೃಹ ಮಂಡಳಿ ಭೂಸ್ವಾಧೀನಕ್ಕೆ ಮುಂದಾಗಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ. ಸ್ಥಳೀಯ ಜನರ ಸಾಮಾಜಿಕ ಸ್ಥಿತಿಗತಿ ಅಧ್ಯಯನ ನಡೆಸದೆ ನಡೆಯುತ್ತಿರುವ ಭೂಸ್ವಾಧಿನ ವಿರುದ್ಧ ತೀವ್ರಗತಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.