ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ತಾಲ್ಲೂಕು ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.
ಪಟ್ಟಣದ ಎಲ್ಲ ಮುಖ್ಯ ರಸ್ತೆಗಳಲ್ಲಿಯೂ ವಾಹನ ದಟ್ಟಣೆ ಉಂಟಾಗಿತ್ತು. ರೈತರ ಹೋರಾಟವನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.
ಕಳೆದ ಒಂದು ತಿಂಗಳಿನಿಂದ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ತಾಲ್ಲೂಕು ಕಚೇರಿ ಮುತ್ತಿಗೆ ಆಯೋಜಿಸಲಾಗಿತ್ತು. ಸಾವಿರಾರು ಮಂದಿ ರೈತರು ಪಟ್ಟಣದ ಶಿವಾಜಿ ವೃತ್ತದಲ್ಲಿ ಜಮಾವಣೆಗೊಂಡರು. ಮತ್ತೊಂದು ತಂಡ ಎಎಸ್‌ಬಿ ಮೈದಾನದಲ್ಲಿ ಜಮಾವಣೆಗೊಂಡಿತು. ಎಲ್ಲ ರೈತರು ಒಗ್ಗೂಡಿ ಪಟ್ಟಣದ ಹೃದಯ ಭಾಗ ದೇವರಕೊಂಡಪ್ಪ ವೃತ್ತದಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆ ಸಲ್ಲಿಸಿದರು.
ನೂರಾರು ಮಂದಿ ರೈತ ಮಹಿಳೆಯರು ಹೋರಾಟಕ್ಕೆ ಬಲ ನೀಡಿದರು. ‘ಜೈ ಜವಾನ್ ಜೈ ಕಿಸಾನ್, ಪ್ರಾಣ ಕೊಟ್ಟೆವು ಭೂಮಿ ಕೊಡುವುದಿಲ್ಲ’ ಘೋಷಣೆ ಮುಗಿಲು ಮುಟ್ಟಿತು. ಸಿಪಿಐಎಂ, ಕೆಆರ್‌ಎಸ್, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ವೇದಿಕೆ ಸೇರಿದಂತೆ ಕನ್ನಡ ಪರ ಸಂಘಟನೆಗಳು, ಗಮನ ಮಹಿಳಾ ಒಕ್ಕೂಟ, ಆನೇಕಲ್ ತಾಲ್ಲೂಕು ವಕೀಲರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ವಿಸಿಕೆ ಪಕ್ಷ ಸೇರಿದಂತೆ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.