ಕನಕಪುರ/ರಾಮನಗರ: ಭೂ ಸ್ವಾಧೀನ ಪರಿಹಾರ ಮೊತ್ತ ಬಿಡುಗಡೆ, ನಗರಸಭೆಯಲ್ಲಿ ಖಾತೆ ಮಾಡಿಸಿಕೊಡುವುದು ಸೇರಿದಂತೆ ವಿವಿಧ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುವುದಾಗಿ ಹೇಳಿ ಹಲವರಿಂದ ಲಕ್ಷಾಂತರ ರೂಪಾಯಿತ ಪಡೆದು ವಂಚಿಸಿದ್ದ ಮುಬಾರಕ್ (34) ಎಂಬಾತನನ್ನು ಕನಕಪುರ ಟೌನ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆನೇಕಲ್‌ನ ಅಮೀನ್ ಮಸೀದಿ ರಸ್ತೆಯ ಬೇಡರಪೇಟೆ ನಿವಾಸಿಯಾಗಿದ್ದಾನೆ. ಇತ್ತೀಚೆಗೆ ರಾಮನಗರದ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರಿಗೆ ಭೂ ಸ್ವಾಧೀನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿಸಿ ಕೊಡುವುದಾಗಿ ಹೇಳಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲೇ ₹1.37 ಲಕ್ಷ ನಗದು ಪಡೆದು ವಂಚಿಸಿದ್ದ.
ಕನಕಪುರ ನಗರಸಭೆ ಬಳಿ ವಯಸ್ಸಾದ ಮಹಿಳೆಯೊಬ್ಬರಿಗೆ ಖಾತೆ ಮಾಡಿಸಿಕೊಡುವುದಾಗಿ ನಂಬಿಸಿ ₹1.43 ಲಕ್ಷ ಪಡೆದು ಮೋಸ ಮಾಡಿದ್ದ. ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬೆನ್ನತ್ತಿದ್ದ ಕನಕಪುರ ಇನ್‌ಸ್ಪೆಕ್ಟರ್ ಅನಂತರಾಮು ನೇತೃತ್ವದ ತಂಡ ಮುಬಾರಕ್‌ನನ್ನು ಬಂಧಿಸಿ ಜೈಲಿಗಟ್ಟಿದೆ.
ವಂಚನೆಯನ್ನೇ ಜೀವನದ ವೃತ್ತಿ ಮಾಡಿಕೊಂಡಿದ್ದ ಆರೋಪಿಯಿಂದ ₹1.27 ಲಕ್ಷ ನಗದು, 42 ಗ್ರಾಂ ಚಿನ್ನದ ಸರ, 2 ಜೊತೆ ಚಿನ್ನದ ಓಲೆ ಹಾಗೂ 9 ಚಿನ್ನದ ಗುಂಡುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅಧಿಕಾರಿ ಸೋಗು:
ಸರ್ಕಾರಿ ಯೋಜನೆಯೊಂದಕ್ಕೆ ಮಾಜಿ ಶಾಸಕ ಲಿಂಗಪ್ಪ ಅವರ ಜಮೀನು ಸ್ವಾಧೀನವಾಗಿರುವುದನ್ನು ಅರಿತಿದ್ದ ಆತ, ಕೇಂದ್ರ ಸರ್ಕಾರದಿಂದ ₹23 ಲಕ್ಷ ಪರಿಹಾರ ಬಂದಿದೆ ಎಂದು ಬಿಡದಿ ಪುರಸಭೆಯ ನೌಕರ ನಟರಾಜ್ ಎನ್ನುವ ಹೆಸರಲ್ಲಿ ಕರೆ ಮಾಡಿ ಮಾತನಾಡಿದ್ದ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ ಹೇಳಿದ್ದ.
ತಾನು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದು ಪರಿಹಾರ ಪಡೆಯಲು ₹1.37 ಲಕ್ಷದ ಬಾಂಡ್ ಬೇಕೆಂದು ಹೇಳಿದ್ದ. ಅದರಂತೆ ಲಿಂಗಪ್ಪ ಅವರು ತಮ್ಮ ಆಪ್ತ ಸಹಾಯಕನ ಮೂಲಕ ಮೊತ್ತ ತಲುಪಿಸುವುದಾಗಿ ಹೇಳಿದಾಗ, ಜಗದೀಶ್ ಎಂಬ ಹುಡುಗನಿಗೆ ಕೊಡುವಂತೆ ಆರೋಪಿ ಹೇಳಿದ್ದ. ಹಣ ತಂದಾಗ ಈತನೇ ಜಗದೀಶ್ ಎಂದು ಪರಿಚಯಿಸಿಕೊಂಡು ಹಣ ಪಡೆದುಕೊಂಡಿದ್ದ. ನಂತರ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅನಂತರಾಮ್, ಸಿಬ್ಬಂದಿ ಶಿವಶಂಕರ್, ರಮೇಶ್, ತ್ರಿವೇಣ್ ಕುಮಾರ್, ಶಂಕರ್, ಲಿಂಗಯ್ಯ ನೇತತ್ವದ ತಂಡ ಬಂಧನ ಕಾರ್ಯಾಚರಣೆ ಕೈಗೊಂಡಿತ್ತು.
8 ಪ್ರಕರಣ ಪತ್ತೆ:
ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹಲವರಿಗೆ ವಂಚಿಸಿರುವುದು ಗೊತ್ತಾಯಿತು. ಆತನ ಬಂಧನದಿಂದಾಗಿ ಕನಕಪುರದಲ್ಲಿ ಟೌನ್ ಠಾಣೆಯಲ್ಲೇ 2023ರಿಂದ ಇಲ್ಲಿವುರೆಗೆ ದಾಖಲಾಗಿದ್ದ 6 ಪ್ರಕರಣ ಹಾಗೂ ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ದಾಖಲಾಗಿದ್ದ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಕಂದಾಯ ಇಲಾಖೆ, ಭೂ ಸ್ವಾಧೀನ ಪರಿಹಾರ, ಜಮೀನು ದಾಖಲೆಗಳ ಬಗ್ಗೆ ಮುಬಾರಕ್ ಚನ್ನಾಗಿ ತಿಳಿದುಕೊಂಡಿದ್ದ. ನಗರಸಭೆ, ಪುರಸಭೆ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳಿಗೆ ಜಮೀನಿನ ವಿವಿಧ ಕೆಲಸಗಳಿಗೆ ಬರುವ ಅಮಾಯಕರನ್ನು ಗಮನಿಸುತ್ತಿದ್ದ. ಅಧಿಕಾರಿಗಳ ಸೋಗಿನಲ್ಲಿ ಅವರನ್ನು ಪರಿಚಯಿಸಿಕೊಂಡು ಕೆಲಸ ಮಾಡಿಸಿಕೊಡುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಕೀಳುತ್ತಿದ್ದ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.