ADVERTISEMENT

ಗೋಮಾಳ ಒತ್ತುವರಿ ತೆರವಿಗೆ ತಾಕೀತು

ಯುವಕನ ಫೇಸ್‌ಬುಕ್‌ ಪೋಸ್ಟ್‌ಗೆ ಎಚ್ಚೆತ್ತ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 5:01 IST
Last Updated 3 ಆಗಸ್ಟ್ 2021, 5:01 IST
ಉಜ್ಜನಿ ಗ್ರಾಮದ ಗೋಮಾಳ ಒತ್ತುವರಿ ಪರಿಶೀಲಿಸುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು
ಉಜ್ಜನಿ ಗ್ರಾಮದ ಗೋಮಾಳ ಒತ್ತುವರಿ ಪರಿಶೀಲಿಸುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು   

ದೊಡ್ಡಬಳ್ಳಾಪುರ:ಗೋಮಾಳ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ಜಾನುವಾರು ಮೇಯಲು ಸ್ಥಳ ಇಲ್ಲದಂತೆ ಮಾಡುತ್ತಿದ್ದಾರೆ ಎಂಬ ಯುವಕನೊಬ್ಬನ ಜನಪರ ಕಾಳಜಿಯ ಫೇಸ್‌ಬುಕ್‌ ಪೋಸ್ಟ್‌ಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸ್ಪಂದಿಸಿದ್ದು, ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಲ್ಲೂಕಿನ ಉಜ್ಜನಿ ಗ್ರಾಮದ ಸರ್ವೆ ನಂ. 27ರ ಗೋಮಾಳ ಜಾಗವನ್ನು ಜಾನುವಾರು ಮೇಯಿಸಲು ಸರ್ಕಾರ ಮೀಸಲಿಟ್ಟಿದೆ. ಆದರೆ, ಈ ಗೋಮಾಳವನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಜಮೀನಾಗಿ ಪರಿವರ್ತಿಸುವ ಮೂಲಕ ಜಾನುವಾರು ಮೇಯಿಸಲು ಸ್ಥಳದ ಕೊರತೆ ಉಂಟು ಮಾಡುತ್ತಿದ್ದಾರೆ ಎಂದು ನವೀನ್‌ ಯಾದವ್ ಎನ್ನುವ ಯುವಕ ಜು. 22ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದ.

ಈ ಪೋಸ್ಟ್ ಜಿಲ್ಲಾಧಿಕಾರಿ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಸ್ಥಳ ಪರಿಶೀಲನೆ ನಡೆಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್ ಹಾಗೂ ತಹಶೀಲ್ದಾರ್ ಟಿ.ಎಸ್. ಶಿವರಾಜ್ ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾಹಿತಿ ನೀಡಿದ ಅವರು, ಜಾನುವಾರುಗಳಿಗಾಗಿಯೇ ಮೀಸಲಿಟ್ಟಿರುವ ಗೋಮಾಳ ಒತ್ತುವರಿಯನ್ನು ತಕ್ಷಣದಿಂದಲೇ ತೆರವು ಮಾಡುವಂತೆ ಒತ್ತುವರಿದಾರರಿಗೆ ಸೂಚಿಸಲಾಗಿದೆ. ಅಲ್ಲದೇ ಸೂಚನೆ ಉಲ್ಲಂಘಿಸಿ ಗೋಮಾಳ ಒತ್ತುವರಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ
ನೀಡಿದರು.

ಗೋಮಾಳ ರಕ್ಷಣೆಗೆ ಸಾಮಾಜಿಕ ಜಾಲತಾಣದಲ್ಲಿ ಯುವಕನ ಮನವಿಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ,ತಹಶೀಲ್ದಾರ್ ಸ್ಪಂದಿಸಿರುವ ರೀತಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.