ADVERTISEMENT

ಪಿಡಿಒ ಮರು ವರ್ಗಾವಣೆಗೆ ಮುಖಂಡರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 13:01 IST
Last Updated 14 ಡಿಸೆಂಬರ್ 2019, 13:01 IST
ಪ್ರತಿಕಾಗೋಷ್ಠಿಯಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿದರು
ಪ್ರತಿಕಾಗೋಷ್ಠಿಯಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿದರು   

ದೇವನಹಳ್ಳಿ: ‘ಇಲ್ಲಿನ ಜಾಲಿಗೆಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದ ಉಷಾ ಅವರು ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರನ್ನು ಕಾರಹಳ್ಳಿಗೆ ವರ್ಗಾವಣೆ ಮಾಡಲಾಗಿದೆ. ಈಗ ಮತ್ತೆ ಜಾಲಿಗೆ ಪಂಚಾಯಿತಿಗೆ ಮರು ವರ್ಗಾವಣೆ ಮಾಡಲು ಆದೇಶ ಹೊರಡಿಸಲಾಗಿದೆ. ಮರುವರ್ಗಾವಣೆ ವಿರೋಧಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಎಚ್ಚರಿಸಿದರು.

ಇಲ್ಲಿನ ಪಿ.ವಿ.ಬಿ.ಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಲಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿಯಾಗಿ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಯಾವುದೇ ಮೂಲ ಸೌಲಭ್ಯ ದೊರೆರಿಲ್ಲ. ದಲಿತರ ಕಾಲೊನಿಗಳು ಶೋಚನೀಯ ಸ್ಥಿತಿಯಲ್ಲಿವೆ. ಉಷಾ ಅವರು ಪಿಡಿಒ ಆಗಿದ್ದ ಎರಡು ವರ್ಷದಲ್ಲಿ ಯಾವುದೇ ನಾಯಕರ ಜಯಂತಿ ಆಚರಿಸಿಲ್ಲ. ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.

‘14ನೇ ಹಣಕಾಸು ಯೋಜನೆ ಅನುದಾನ, ನರೇಗಾದಲ್ಲಿ ಅಕ್ರಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ 25ರಷ್ಟು ಮೀಸಲು ಅನುದಾನ, ವಿಕಲ ಚೇತನರ ಶೇ 5ರಷ್ಟು ಮೀಸಲು ಹಣ ಫಲಾನುಭವಿಗಳಿಗೆ ಉಪಯೋಗ ಮಾಡಿಲ್ಲ. 2018ರ ಮಾರ್ಚ್‌ನಲ್ಲಿ ಅಮಾನತುಗೊಂಡು, ಬೇರೆಡೆ ವರ್ಗಾವಣೆಯಾಗಿದ್ದು, ಜಾಲಿಗೆ ಪಂಚಾಯಿತಿಯಲ್ಲಿ ಇಲಾಖೆ ತನಿಖೆ ನಡೆಸುತ್ತಿದೆ. ಇಷ್ಟೆಲ್ಲ ಬೆಳೆವಣಿಗೆ ಇರುವಾಗ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಕ್ಷ್ಯ ನಾಶಪಡಿಸಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಮತ್ತೆ ಮರು ವರ್ಗಾವಣೆಗೆ ಇಲಾಖೆ ಮುಂದಾಗಿರುವುದು ಹಾಸ್ಯಾಸ್ಪದ’ ಎಂದು ದೂರಿದರು.

ADVERTISEMENT

‘ಎರಡು ವರ್ಷದಲ್ಲಿ ನಾಲ್ಕು ಬಾರಿ ವಾರ್ಡ್ ಸಭೆ, ಗ್ರಾಮ ಸಭೆ, ಮಕ್ಕಳ ಮತ್ತು ಮಹಿಳೆಯರ ಗ್ರಾಮ ಸಭೆ ನಡೆಸಿಲ್ಲ. ಇಷ್ಟೆಲ್ಲ ಇದ್ದರೂ ಅವರನ್ನೆ ಮತ್ತೆ ಜಾಲಿಗೆ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿದರೆ ಸ್ಥಳೀಯರ ಸಮಸ್ಯೆ ಬಗೆಹರಿಯಲು ಯಾವ ರೀತಿ ಸಾಧ್ಯ’ ಎಂದರು.

ಮುಖಂಡರಾದ ಶಿವಾನಂದ್, ನೀಲೇರಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.