ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬೇಗಹಳ್ಳಿಯಲ್ಲಿ ಚಿರತೆಯನ್ನು ಬೋನಿಗೆ ಹಾಕಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮವಹಿಸಿದ್ದಾರೆ. ಬೇಗಿಹಳ್ಳಿ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಎರಡು ಹಸುಗಳನ್ನು ಸಹ ಚಿರತೆ ತಿಂದು ಹಾಕಿತ್ತು. ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹಲವು ರೀತಿಯ ಕ್ರಮಕೈಗೊಂಡಿತ್ತು.
ಹಸು ತಿಂದ ಸುತ್ತಮುತ್ತಲಿನ ಜಾಗದಲ್ಲಿಯೇ ಬೋನ್ ಇಡಲಾಗಿತ್ತು. ಬುಧವಾರ ಬೆಳಗಿನ ಜಾವ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನ್‌ಗೆ ಬಿದ್ದಿದೆ. ಬನ್ನೇರುಘಟ್ಟ ಉದ್ಯಾನ ಪಶುವೈದ್ಯಾಧಿಕಾರಿ ಕಿರಣ್, ಚಿರತೆ ಆರೋಗ್ಯ ತಪಾಸಣೆ ನಡೆಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಕಾಡಿಗೆ ಬಿಟ್ಟಿದ್ದಾರೆ.
ಅರಣ್ಯ ಇಲಾಖೆಯಿಂದ ಸೆರೆ ಹಿಡಿದ 8 ವರ್ಷದ ಗಂಡು ಚಿರತೆಯಾಗಿದೆ. ಬೇಗಿಹಳ್ಳಿ ಸಮೀಪ ಎರಡು ಹಸುಗಳನ್ನು ತಿಂದಿತ್ತು. ಚಿರತೆ ಓಡಾಟದಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಎಸಿಎಫ್ ಗಣೇಶ್, ಆರ್‌ಎಫ್‌ಒ ಶ್ರೀಧರ್, ಡಿಆರ್‌ಎಫ್‌ಓ ಬಾಲಕೃಷ್ಣ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆಗೆ ಮೈಕ್ರೋ ಚಿಪ್ ಅಳವಡಿಸಿ ಕಾಡಿಗೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
ಹೆಬ್ಬಗೋಡಿಯ ಕಮ್ಮಸಂದ್ರ, ಚಂದಾಪುರ ಸಮೀಪದ ಹೀಲಲಿಗೆ, ಆನೇಕಲ್ ಸಮೀಪದ ಕಾವಲಹೊಸಹಳ್ಳಿ, ಹುಸ್ಕೂರು ಸಮೀಪದ ಗಟ್ಟಹಳ್ಳಿ, ಗೋಪಸಂದ್ರ ಗ್ರಾಮಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.