ADVERTISEMENT

ಸಹಕಾರ ಸಂಘಗಳು ಬಲಿಷ್ಠಗೊಳ್ಳಲಿ

ದೇವನಹಳ್ಳಿ: ನವಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 13:50 IST
Last Updated 18 ನವೆಂಬರ್ 2019, 13:50 IST
ಸಹಕಾರ ಸಂಘ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು
ಸಹಕಾರ ಸಂಘ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು   

ದೇವನಹಳ್ಳಿ: ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳು ಬಲಿಷ್ಠವಾದರೆ ಮಾತ್ರ ನವಭಾರತ ನಿರ್ಮಾಣದ ಕನಸು ನನಸಾಗಲಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಂಪಂಗಿಗೌಡ ಹೇಳಿದರು.

ಇಲ್ಲಿನ ಹಾಲು ಒಕ್ಕೂಟದ ಶಿಬಿರ ಕಚೇರಿ ಸಭಾಂಗಣದಲ್ಲಿ ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ಮತ್ತು ತಾಲ್ಲೂಕು ಸಹಕಾರ ಸಂಘಗಳ ಒಕ್ಕೂಟ ವತಿಯಿಂದ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ 2019ರ ನವಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರ ಹೊಸ ಯೋಜನೆಗಳು ಕುರಿತು ನಡೆದ ಚರ್ಚೆ ಉದ್ಘಾಟಿಸಿ ಮಾತನಾಡಿದರು.

1924ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಸಹಕಾರ ಸಂಘ ಆರಂಭಗೊಂಡಿತ್ತು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾದ ನಂತರ ಸಹಕಾರ ಕ್ಷೇತ್ರದ ವ್ಯಾಪ್ತಿ ವಿಸ್ತರಿಸಿಕೊಂಡು ಬೆಳವಣಿಗೆಗೆ ಕಾರಣವಾಯಿತು. ಇದೇ 1956ಸಾಲಿನಲ್ಲಿ ಮೈಸೂರು ರಾಜ್ಯ ಸಹಕಾರಿ ಯೂನಿಯನ್‌ ಎಂದು ಮರುನಾಮಕರಣಗೊಂಡಿತು ಎಂದು ಹೇಳಿದರು.

ADVERTISEMENT

1987 ಏ.27ರಂದು ಕರ್ನಾಟಕ ಸರ್ಕಾರ ರಾಜ್ಯದ ನಾಲ್ಕು ರಾಜ್ಯಮಟ್ಟದ ಸಹಕಾರ ಸಂಸ್ಥೆಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹೆಸರಿನಲ್ಲಿ ಹೊಸರೂಪ ಪಡೆಯಿತು ಎಂದು ಹೇಳಿದರು.

ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳು ಸಹಕಾರ ಸಂಘಗಳ ಮೂಲಕ ಅನುಷ್ಠಾನವಾಗಬೇಕು. ಸಹಕಾರ ಸಂಘಗಳು ಸರ್ಕಾರ ನಂಬಿಕೆ ನಂಬಿಕೆ ಉಳಿಸಿಕೊಂಡು ರೈತರ ಹಿತಕಾಯಬೇಕು ಎಂದು ಹೇಳಿದರು.

ಕನಕಪುರದಲ್ಲಿನ ಹಾಲಿನ ಶೀತಲೀಕರಣ ಕೇಂದ್ರ ಮತ್ತು ವಿವಿಧ ಹಾಲಿನ ಉತ್ಪನ್ನಗಳಿಂದ ಸಾರಿಗೆ ವ್ಯವಸ್ಥೆಯಲ್ಲಿ ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ. ಪ್ರಸುತ ಒಂದೂ ರೂಪಾಯಿ ಪ್ರತಿಲೀಟರ್ ಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹಾಲಿನ ದರ ಏರಿಕೆ ಮಾಡುವ ಚಿಂತನೆ ಒಕ್ಕೂಟದಲ್ಲಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮತ್ತು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು ಮಾತನಾಡಿ, ಹಾಲಿಗೆ ಪ್ರೋತ್ಸಾಹಧನ ಸರ್ಕಾರ ನೀಡದೆ ಇದ್ದಿದ್ದರೆ ಪಶುಪಾಲಕರ ಸ್ಥಿತಿ ಸಂಕಷ್ಟದಲ್ಲಿರುತ್ತಿತ್ತು ಎಂದು ಹೇಳಿದರು.

ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕಿ ಯಶಸ್ವಿನಿ ಮಾತನಾಡಿ, ವ್ಯವಸಾಯ ಸೇವಾ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಇಡೀ ಜಿಲ್ಲೆಗೆ ಕಾಯಕ ಯೋಜನೆಯಡಿ ಒಂದು ಅರ್ಜಿ ಮಾತ್ರ ಬಂದಿದೆ. ಜಿಲ್ಲೆಯಲ್ಲಿ 60ಮಂದಿ ಅರ್ಹರಿಗೆ ಅವಕಾಶವಿದೆ. ಕರಕುಶಲ ವಸ್ತು ತಯಾರಿಕೆಗೆ ₹10ಲಕ್ಷಸಾಲ ನೀಡಲಾಗುತ್ತಿದ್ದು ಈಪೈಕಿ ₹5ಲಕ್ಷ ಬಡ್ಡಿರಹಿತ ಸಾಲ, ಇನ್ನುಳಿದ ₹5ಲಕ್ಷಕ್ಕೆ ಶೇ4ರ ದರದಲ್ಲಿ ಬಡ್ಡಿ ಪಾವತಿಸಬೇಕಾಗಿದೆ. ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಮಂಡಿಬೆಲೆ ರಾಜಣ್ಣ ಮಾತನಾಡಿದರು. ಟಿ.ಎ.ಪಿ.ಸಿ.ಎಂ ಎಸ್ ಅಧ್ಯಕ್ಷ ಶ್ರೀರಾಮಯ್ಯ, ಬಮೂಲ್ ಉಪವ್ಯವಸ್ಥಾಪಕ ಡಾ.ಗಂಗಯ್ಯ,ಸಹಾಯಕ ವ್ಯವಸ್ಥಾಪಕರಾದ ಮುನಿರಾಜೇಗೌಡ, ಡಾ.ರಾಜೇಶ್, ಎಂ.ಪಿ.ಸಿ.ಎಸ್ ನೌಕರರ ಒಕ್ಕೂಟ ತಾಲ್ಲೂಕು ಅಧ್ಯಕ್ಷ ಚನ್ನಕೇಶವ, ಜಿಲ್ಲಾ ಸಹಕಾರ ಒಕ್ಕೂಟ ಮುಖ್ಯಕಾರ್ಯನಿರ್ವಹಣಾಧಿಕಾರಿ ವೀರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.