ADVERTISEMENT

ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 7:10 IST
Last Updated 8 ಸೆಪ್ಟೆಂಬರ್ 2022, 7:10 IST
ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಚೆ ಕಾರ್ಡ್‌ ಪ್ರದರ್ಶಿಸಲಾಯಿತು
ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಚೆ ಕಾರ್ಡ್‌ ಪ್ರದರ್ಶಿಸಲಾಯಿತು   

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡಬಳ್ಳಾಪುರವೇ ಜಿಲ್ಲಾ ಕೇಂದ್ರವಾಗಬೇಕು ಎಂದು ಆಗ್ರಹಿಸಿ ವಿವಿಧ ಹಂತದಲ್ಲಿ ಹೋರಾಟ ನಡೆಸಲು ಕನ್ನಡಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.

ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎ. ನಂಜಪ್ಪ, ಖಜಾಂಚಿ ಜಿ.ಎಸ್. ಹನುಮಂತರೆಡ್ಡಿ, ‘ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ದೇವನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದಾಗಿ ಹೇಳಿರುವುದನ್ನು ಸಮಸ್ತ ದೊಡ್ಡಬಳ್ಳಾಪುರದ ಜನತೆ ಪರವಾಗಿ ಖಂಡಿಸುತ್ತೇವೆ’ ಎಂದರು.

ಮುಖ್ಯಮಂತ್ರಿಗೆ ಜನಸಾಮಾನ್ಯರು ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಹಾಗೂ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದೆ. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗದೆ ಇರಲು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರು ದೊಡ್ಡಬಳ್ಳಾಪುರಕ್ಕೆ ಬಂದರೆ ಘೇರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದು
ಹೇಳಿದರು.

ADVERTISEMENT

ಜಿಲ್ಲಾ ಕೇಂದ್ರವು ದೊಡ್ಡಬಳ್ಳಾಪುರದಿಂದ ಕೈತಪ್ಪಲು ಅಂದಿನ ಸಚಿವರಾಗಿದ್ದ ಕೃಷ್ಣ ಬೈರೇಗೌಡ, ಕ್ಷೇತ್ರದ ಶಾಸಕ ಟಿ. ವೆಂಕಟರಮಣಯ್ಯ ಸೇರಿದಂತೆ ಎಲ್ಲರೂ ಹೊಣೆಗಾರರಾಗಿದ್ದಾರೆ ಎಂದು ಟೀಕಿಸಿದರು.

ದೊಡ್ಡಬಳ್ಳಾಪುರವೇ ಏಕೆ ಜಿಲ್ಲಾ ಕೇಂದ್ರವಾಗಬೇಕು ಎನ್ನುವ ಅಂಶ ಒಳಗೊಂಡ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿದೆ. ಸಾರ್ವಜನಿಕರು ಪತ್ರ ಬರೆಯುತ್ತಿದ್ದಾರೆ. ಈಗ ಸಚಿವ ಸುಧಾಕರ್ ದೊಡ್ಡಬಳ್ಳಾಪುರದ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವುದನ್ನು ಖಂಡಿಸಿ ಮುಂದೆ ಅವರ ಕಾರ್ಯಕ್ರಮಗಳಿಗೆ ಘೇರಾವ್ ಹಾಕಲಾಗುವುದು. ಜನೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಿ ಜಿಲ್ಲಾ ಕೇಂದ್ರ ಹೋರಾಟಕ್ಕೆ ಬೆಂಬಲಿಸಲಾಗುವುದು ಎಂದು ತಿಳಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎಚ್. ಅಗ್ನಿ ವೆಂಕಟೇಶ್ ಮಾತನಾಡಿ, ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕೆಂದು ಹಿಂದೆ ನಡೆಯುತ್ತಿದ್ದ ಹೋರಾಟ ನಿಂತಿರುವುದು ಹಾಗೂ ಕಾನೂನು ಹೋರಾಟದಲ್ಲಿ ಎಡವಿರುವುದು ಪರಿಸ್ಥಿತಿ ಕೈಮೀರಲು ಕಾರಣವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಸೋಮು ವಿಶ್ವಕರ್ಮ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ನಾಗರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ, ವೈರ್‌ ಶಿವು, ನಯಾಜ್‌ ಖಾನ್, ಒಕ್ಕೂಟದ ಮುಖಂಡರಾದ ಶಿವಶಂಕರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.