ADVERTISEMENT

ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣಾ ತಾಲೀಮು ಆರಂಭ

ಲೋಕಸಭಾ ಚುನಾವಣೆಗೆ ಸಿದ್ಧತೆ: ಮತದಾರರ ಸೆಳೆಯಲು ಆಮಿಷ

ನಟರಾಜ ನಾಗಸಂದ್ರ
Published 9 ಜನವರಿ 2024, 7:16 IST
Last Updated 9 ಜನವರಿ 2024, 7:16 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇಯಲ್ಲಿ ಸಾರ್ವಜನಿಕರಿಗೆ ವಿದ್ಯುತ್‌ ಮತಯಂತ್ರ ಕಾರ್ಯನಿರ್ವಹಣೆ ಕುರಿತು ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಪ್ರಾರಂಭವಾಗಿದೆ
ದೊಡ್ಡಬಳ್ಳಾಪುರ ತಾಲ್ಲೂಕು ಕಚೇಯಲ್ಲಿ ಸಾರ್ವಜನಿಕರಿಗೆ ವಿದ್ಯುತ್‌ ಮತಯಂತ್ರ ಕಾರ್ಯನಿರ್ವಹಣೆ ಕುರಿತು ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಪ್ರಾರಂಭವಾಗಿದೆ   
Nethravathi M.

ದೊಡ್ಡಬಳ್ಳಾಪುರ: 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ತಾಲ್ಲೂಕಿನಲ್ಲಿ ರಾಜಕೀಯ ಪಕ್ಷಗಳು ಮತದಾರರ ಮನವೊಲಿಕೆಯ ತಾಲೀಮನ್ನು ಪ್ರಾರಂಭಿಸಿವೆ.

ಧಾರ್ಮಿಕ ಕ್ಷೇತ್ರಗಳಿಗೆ ಮತದಾರರು ಹೋಗಿಬರಲು ಉಚಿತ ಬಸ್‌ ಸೌಲಭ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಮಾದರಿಯ ಕಿಟ್‌ಗಳ ವಿತರಣೆ, ಮತದಾರರ ಮನೆಗಳಿಗೆ ತಮ್ಮ ಹಾಗೂ ಪಕ್ಷದ ಸಾಧನೆಗಳನ್ನು ಒಳಗೊಂಡ ಕ್ಯಾಲೆಂಡರ್‌ಗಳ ವಿತರಣೆ ಮಾಡಲಾಗುತ್ತಿದೆ.

ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ‘ಮನವೊಲಿಕೆ’, ಸ್ಥಳೀಯ ಮುಖಂಡರ ಹುಟ್ಟಹಬ್ಬದ ನೆಪದಲ್ಲಿ ಪ್ಲೆಕ್ಸ್‌ಗಳನ್ನು ಹಾಕಿಸುವುದು, ಸಾಮಾಜಿಕ ಜಾಲತಾಣ, ವಾಟ್ಸ್‌ಆಪ್‌ ಗ್ರೂಫ್‌ಗಳಲ್ಲಿ ತಮ್ಮ ಸಾಧನೆಗಳ ವಿಡಿಯೊ, ಬೆಂಬಲಿಗರಿಂದ ಗುಣಗಾನ ಸೇರಿದಂತೆ ಎಲ್ಲಾ ರೀತಿಯ ಪ್ರಚಾರಗಳು ಪ್ರಾರಂಭವಾಗಿವೆ.

ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಎಂ.ವೀರಪ್ಪಮೊಯ್ಲಿ ಅವರು ಈಗಾಗಲೇ ಒಂದು ಸುತ್ತಿನ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಟಿಕೇಟ್‌ ಆಕಾಂಕ್ಷಿಯಾಗಿರುವ ಎಂಎಸ್‌.ರಾಮಯ್ಯ ಅವರ ಕುಟುಂಬದ ರಕ್ಷಾರಾಮಯ್ಯ ಅವರು ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರ ಜನ್ಮದಿನಾಚರಣೆಗಳಿಗೆ ಶುಭಾಶಯ ಕೋರಿ ಪ್ಲೆಕ್ಸ್‌ ಹಾಕಿಸುವ ಮೂಲಕ ಮತದಾರರನ್ನು ತಲುಪಲು, ಧಾರ್ಮಿಕ ಕ್ಷೇತ್ರಗಳಿಗೆ ಉಚಿತ ಬಸ್‌ ಸೌಲಭ್ಯ ಹಾಗೂ ವಿವಿಧ ಸಾಮಾಜಿಕ ಸೇವಾ ಕೆಲಗಳಲ್ಲಿ ಸಕ್ರಿಯವಾಗಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಬಿ.ಎನ್‌. ಬಚ್ಚೇಗೌಡ ಅವರು ಕ್ಷೇತ್ರಕ್ಕೆ ಭೇಟಿ ನೀಡುವುದು ವಿರಳವಾಗಿದೆ. ಅಲ್ಲದೆ ಅವರ ಪುತ್ರ ಶರತ್‌ಬಚ್ಚೇಗೌಡ ಅವರು ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಶಾಸಕರಾಗಿ ಆಯ್ಕೆಯಾದ ನಂತರವಂತು ಅವರು ಸಕ್ರಿಯ ರಾಜಕಾರಂಣದಿಂದ ಮತ್ತಷ್ಟು ಅಂತರವನ್ನು ಕಾಯ್ದುಕೊಂಡಿದ್ದಾರೆ.

ಬಿಜೆಪಿ, ಜೆಡಿಎಸ್‌ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡ ನಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯಾವ ಪಕ್ಷದ ಪಾಲಾಗಬಹುದು ಎನ್ನುವ ಗೊಂದಲ ಕಾರ್ಯಕರ್ತರಲ್ಲಿದೆ. ಈ ಹಿಂದೆ ಜೆಡಿಎಸ್‌ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಹಾಗಾಗಿ ಯಾವ ಪಕ್ಷಕ್ಕೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಹಂಚಿಕೆಯಾಗಬಹುದು ಎನ್ನುವ ಸ್ಪಷ್ಟ ಚಿತ್ರಣ ಇಲ್ಲದೆ ಈ ಎರಡೂ ಪಕ್ಷಗಳಿಂದ ಯಾರೊಬ್ಬ ಆಕಾಂಕ್ಷಿಯು ಸಹ ಕ್ಷೇತ್ರದಲ್ಲಿ ಗುರುತಿಸಿಕೊಂಡಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಮಾತ್ರ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ.

ಮತದಾರರಿಗೆ ಪ್ರಾತ್ಯಕ್ಷಿಕೆ

ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್‌ ಮತಯಂತ್ರದಲ್ಲಿ (ಇವಿಎಂ)ಸಾರ್ವಜನಿಕರು ತಮ್ಮ ಅಭ್ಯರ್ಥಿಯ ಸಂಖ್ಯೆಯ ಗುಂಡಿ ಒತ್ತಿದರೆ ಅದೇ ಸಂಖ್ಯೆಯ ಚೀಟಿ ಮುದ್ರಿತವಾಗುವುದನ್ನು ಪರಿಶೀಲಿಸಿಕೊಳ್ಳುವ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆಯ ತಾಲೀಮನ್ನು ಚುನಾವಣಾ ಆಯೋಗ ಆರಂಭಿಸುವ ಮೂಲಕ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಅಧಿಕೃತ ತಯಾರಿಗೆ ಚಾಲನೆ ನೀಡಿದೆ.

ಮತದಾರರ ಪಟ್ಟಿಯ ವಾರ್ಷಿಕ ಪರಿಷ್ಕರಣೆಯ ಕರಡು ಪಟ್ಟಿಯನ್ನು ಡಿಸೆಂಬರ್‌ನಲ್ಲೇ ಪ್ರಕಟಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಮತದಾರರಿಂದಲು ಆಕ್ಷೇಪಣೆ ಆಹ್ವಾನಿಸಿದ್ದು, ಅಂತಿಮ ಮಪತದಾರರ ಪಟ್ಟಿ ಜ.22 ರಂದು ಪ್ರಕಟವಾಗಲಿದೆ. ಆದರೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಹಾಗೂ ಇತರೆ ಬದಲಾವಣೆಗಳಿಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನದವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ’ ಎಂದು ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ತಿಳಿಸಿದ್ದಾರೆ.

ಪ್ಲೈಂಗ್‌ ಸ್ಕ್ವಾಂಡ್‌, ವಿಡಿಯೊ ತಂಡ, ಚೆಕ್‌ಪೋಸ್ಟ್‌ ತಂಡ ಹಾಗೂ ಚುನಾವಣಾ ಸಂದರ್ಭದಲ್ಲಿ ಅಭ್ಯಥ್ಯಿಗಳ ಲೆಕ್ಕಪತ್ರ ಪರಿಶೀಲನ ಅಧಿಕಾರಿಗಳ ತಂಡಗಳನ್ನು ಈಗಾಗಲೇ ಚುನಾವಣ ಶಾಖೆ ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.