ಹೊಸಕೋಟೆ: ಸಮಾಜದ ಓರೆಕೋರೆ ತಿದ್ದುವಲ್ಲಿ ಪತ್ರಿಕಾರಂಗ ಮತ್ತು ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದು ಎಂದು ಹೊಸಕೋಟೆ ಠಾಣೆ ಆರಕ್ಷಕ ನೀರೀಕ್ಷಕ ಗೋವಿಂದ್ ತಿಳಿಸಿದರು.
ನಗರದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಹಮ್ಮಿಕೊಂಡಿದ್ದ ಸಂಘದ ತಾಲ್ಲೂಕು ಘಟಕದ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸರು, ಪತ್ರಕರ್ತರು ಸಾರ್ವಜನಿಕರೊಂದಿಗೆ ದರ್ಪ ತೋರದೆ ಪ್ರೀತಿ, ವಿಶ್ವಾಸದಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ನೈಜ ಪ್ರಾಮಾಣಿಕವಾಗಿ ವರದಿ ಮಾಡಬೇಕಿದೆ. ರಾಜಕಾರಣಗಳು ಅಧಿಕಾರಿಗಳ ಬಳಿ ನ್ಯಾಯ ಸಿಗದಿದ್ದಾಗ ಕೊನೆಯದಾಗಿ ಮಾಧ್ಯಮದ ಬಳಿ ಬರುತ್ತಾರೆ. ಆ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಪತ್ರಿಕೋದ್ಯಮ ಮೂರನೇ ಕಣ್ಣಿನಂತೆ ಕೆಲಸ ಮಾಡಬೇಕಿದೆ. ಆದರೆ, ಈಚೆಗೆ ಪತ್ರಿಕೋದ್ಯಮ ಹಾದಿ ತಪ್ಪಿದೆ ಎಂದರು.
ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ ನಿಕಟಪೂರ್ವ ರಾಜ್ಯ ಘಟಕದ ಅಧ್ಯಕ್ಷ ಕಲಾವಿದ ವಿಷ್ಣು ಮಾತನಾಡಿದರು.
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷ ನಂದಗುಡಿ ರಾಮೇಗೌಡ, ಜಿಲ್ಲಾ ಕಾರ್ಯದರ್ಶಿ ನಟರಾಜ್ ಎಂಎನ್‌ಆರ್, ರಾಜ್ಯ ನಿರ್ದೇಶಕ ಟಿ.ನಾಗರಾಜ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಕ್ಕಲೇಗೌಡ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.