ದಾಬಸ್ ಪೇಟೆ: ‘ವಿಶ್ವಕರ್ಮ ಸಮಾಜವು ಶೈಕ್ಷಣಿಕವಾಗಿ ಮುಂದುವರಿಯಬೇಕಿದೆ. ಸಮುದಾಯದ ಮಕ್ಕಳು ಚೆನ್ನಾಗಿ ಓದಬೇಕು. ಉತ್ತಮ ಕೆಲಸಗಳಿಗೆ ಸೇರಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಎಸ್. ಮಾಳಿಗಾಚಾರ್ ಸಲಹೆ ನೀಡಿದರು.
ಗಂಗಾಧರೇಶ್ವರ ಸ್ವಾಮಿ ವಿಶ್ವಕರ್ಮ ಸಾಂಸ್ಕೃತಿಕ ಸಮಿತಿ ವತಿಯಿಂದ ಶಿವಗಂಗೆಯ ದೇವಾಂಗ ಸಮುದಾಯ ಭವನದಲ್ಲಿ ಭಾನುವಾರ ನಡೆದ ‘ವಿಶ್ವ ಬ್ರಾಹ್ಮಣ ವಟುಗಳಿಗೆ ಉಪನಯನ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುರನಾಳದ ಮಳೆ ರಾಜೇಂದ್ರ ಸ್ವಾಮಿ ಮಠದ ಜಗನ್ನಾಥ ಸ್ವಾಮೀಜಿ ಮಾತನಾಡಿ, ‘ಸಮುದಾಯವು ಹಿಂದುಳಿದಿದೆ. ನಮ್ಮಲ್ಲಿ ಪ್ರತಿಭಾವಂತರು ಇದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು’ ಎಂದು ಹೇಳಿದರು.
ಚಿಕ್ಕುಂಬಿಯ ಅಜಾತ ನಾಗಲಿಂಗ ಮಠದ ಅಭಿನವ ನಾಗಲಿಂಗ ಸ್ವಾಮೀಜಿ ಮಾತನಾಡಿ, ‘ವಿಶ್ವಕರ್ಮ ಜನಾಂಗ ಹಿಂದುಳಿಯಲು ಒಗ್ಗಟ್ಟಿನ ಕೊರತೆ ಕಾರಣ. ಜನಾಂಗದ ಎಲ್ಲರೂ ಒಗ್ಗೂಡಿ ಪರಸ್ಪರ ಸಹಕಾರದಿಂದ ಕೈ ಜೋಡಿಸಿದಾಗ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಮೇಲೆ ಬರಲು ಸಾಧ್ಯ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಗಂಗಾಧರೇಶ್ವರ ಸ್ವಾಮಿ ವಿಶ್ವಕರ್ಮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಹೊನ್ನಪ್ಪಾಚಾರ್, ಪದಾಧಿಕಾರಿಗಳು, ಸಮುದಾಯದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.