ADVERTISEMENT

ರಸ್ತೆ ಸೇರುತ್ತಿರುವ ಮಾಂಸ ತ್ಯಾಜ್ಯ

ಎಳೆದು ತರುತ್ತಿರುವ ಬೀದಿ ನಾಯಿಗಳು, ವಾಹನ ಸವಾರರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:22 IST
Last Updated 11 ಸೆಪ್ಟೆಂಬರ್ 2019, 12:22 IST
ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಅಕ್ಕಯಮ್ಮ ದೇವಾಲಯದ ಸಮೀಪದಲ್ಲಿ ಕೋಳಿತ್ಯಾಜ್ಯದ ಮೂಟೆಯನ್ನು ಬೀದಿನಾಯಿಗಳು ರಸ್ತೆಗೆ ಎಳೆದು ತಂದಿರುವುದು 
ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಅಕ್ಕಯಮ್ಮ ದೇವಾಲಯದ ಸಮೀಪದಲ್ಲಿ ಕೋಳಿತ್ಯಾಜ್ಯದ ಮೂಟೆಯನ್ನು ಬೀದಿನಾಯಿಗಳು ರಸ್ತೆಗೆ ಎಳೆದು ತಂದಿರುವುದು    

ವಿಜಯಪುರ: ನಗರದ ಮಾಂಸ ಮಾರಾಟದ ಅಂಗಡಿಗಳಲ್ಲಿ ತ್ಯಾಜ್ಯವನ್ನು ಮೂಟೆಗಳು ಕಟ್ಟಿಕೊಂಡು ಬಂದು ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳ ಇಕ್ಕೆಲಗಳಲ್ಲಿ ಎಸೆಯುತ್ತಿರುವುದರಿಂದ ದ್ವಿಚಕ್ರ ವಾಹನ ಅಪಘಾತಗಳು ಸಂಭವಿಸುತ್ತಿವೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸ್ಥಳೀಯರಾದ ರಾಮಕೃಷ್ಣ, ‘ಇಲ್ಲಿನ ಬಹುತೇಕ ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯವನ್ನು ಮೂಟೆಗಳಲ್ಲಿ ಕಟ್ಟಿಕೊಂಡು ರಾತ್ರಿಯವರೆಗೂ ಸುಮ್ಮನಿರುವ ಕೆಲವು ವ್ಯಾಪಾರಿಗಳು ರಾತ್ರಿ 11 ಗಂಟೆಯ ನಂತರ ಬೈಪಾಸ್ ರಸ್ತೆ, ಚಿಕ್ಕನಹಳ್ಳಿ ರಸ್ತೆ, ಶಿಡ್ಲಘಟ್ಟದ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಎಸೆದು ಹೋಗುತ್ತಿದ್ದಾರೆ.

‘ಕೋಳಿ ತ್ಯಾಜ್ಯ ತುಂಬಿದ ಮೂಟೆಗಳನ್ನು ರಸ್ತೆಗೆ ಎಳೆದು ತರುವ ಬೀದಿನಾಯಿಗಳು ಕೆಲವೊಮ್ಮೆ ರಸ್ತೆಗಳಲ್ಲಿ ಬರುವ ವಾಹನ ಸವಾರರ ಹಿಂದೆ ಬೀಳುತ್ತವೆ. ಕೆಲವು ವಾಹನ ಸವಾರರು ರಾತ್ರಿಯ ವೇಳೆ ಕತ್ತಲಲ್ಲಿ ನಾಯಿಗಳನ್ನು ಗುರುತಿಸಲು ಸಾಧ್ಯವಾಗದೆ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ’ ಎಂದರು.

ADVERTISEMENT

‘ಕೃಷ್ಣಪ್ಪ ಎನ್ನುವವವರು ನಾಯಿಗಳು ಅಡ್ಡಬಂದು ಬಿದ್ದು ಗಾಯಗೊಂಡು ಅವರ ಕತ್ತಿನಲ್ಲಿ ಮೂಳೆ ಮುರಿದುಕೊಂಡು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು. ಸ್ಥಳೀಯ ನಿವಾಸಿ ನರಸಿಂಹಮೂರ್ತಿ ಮಾತನಾಡಿ, ‘ಸ್ಥಳೀಯವಾಗಿ ರಸ್ತೆಗಳಲ್ಲಿ ಬೀದಿನಾಯಿಗಳ ಹಾವಳಿ ತಪ್ಪಿಸಿಕೊಂಡು ಮುಂದೆ ಸಾಗುವುದು ದೊಡ್ಡ ಸಾಹಸದ ಕೆಲಸವಾಗಿಬಿಟ್ಟಿದೆ. ಗಲ್ಲಿ ಗಲ್ಲಿಗೂ ಬೀದಿ ನಾಯಿಗಳ ಹಿಂಡು ಕಾಣಿಸುತ್ತಿದೆ. ಇಲ್ಲಿ ನಾಯಿಗಳ ಕಾಟ ಅನುಭವಿಸಿ ಹೊರಗೆ ಹೋದರೆ ರಸ್ತೆಗಳ ಪಕ್ಕದಲ್ಲಿ ಹಾಕಿರುವ ಮೂಟೆಗಳನ್ನು ಎಳೆದು ತಂದು ರಸ್ತೆಗಳಲ್ಲಿ ಕಿತ್ತು ಹಾಕಿರುತ್ತವೆ. ತ್ಯಾಜ್ಯದಿಂದ ಹೊರಬರುವ ದುರ್ವಾಸನೆ ಒಂದು ಕಡೆಯಾದರೆ, ಗಾಳಿಗೆ ಹಾರಿಬರುವ ಪುಕ್ಕಗಳಿಂದ ವಾಹನ ಸವಾರರಿಗೆ ಮತ್ತಷ್ಟು ಕಿರಿಕಿರಿ ಉಂಟಾಗುತ್ತಿದೆ’ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ನಗರದಲ್ಲಿನ ಎಲ್ಲಾ ಮಾಂಸ ಮಾರಾಟದ ಅಂಗಡಿಗಳಿಗೆ ನೋಟಿಸ್‌ ಜಾರಿ ಮಾಡಿ, ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜನರಿಗೆ ತೊಂದರೆಯಾಗದ ರೀತಿಯಲ್ಲಿ ವಿಲೇವಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದೇವೆ. ಒಂದು ವೇಳೆ ಪುನಃ ತ್ಯಾಜ್ಯವನ್ನು ರಸ್ತೆಯ ಬದಿಗಳಲ್ಲಿ ಸುರಿಯುತ್ತಿದ್ದರೆ, ಅಂತಹ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೆ ಸರಿಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.