ಆನೇಕಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮದ ಸಂಪರ್ಕಕ್ಕಾಗಿ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಎಂ.ಮೇಡಹಳ್ಳಿ ಗ್ರಾಮದ ರೈತರು ರಾಷ್ಟ್ರೀಯ ಹೆದ್ದಾರಿ ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡುವ ಮತ್ತು ರಸ್ತೆ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಾಯಸಂದ್ರ ಸಮೀಪದ ಮೇಡಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 844 ಹಾದು ಹೋಗುತ್ತಿದೆ. ಈ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳವ ಹಂತದಲ್ಲಿದೆ. ಆದರೆ, ಮೇಡಹಳ್ಳಿಯಿಂದ ಮಾಯಸಂದ್ರ, ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಲಾಗಿದೆ. ಜೊತೆಗೆ ಕೆಳಸೇತುವೆ ಸಹ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದು, ರೈತರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಮೇಡಹಳ್ಳಿ-ಮಾಯಸಂದ್ರ ಕೇಂದ್ರ ಪಂಚಾಯಿತಿ ಗ್ರಾಮಗಳ ನಾಗರೀಕರ ವೇದಿಕೆ ಮತ್ತು ರೈತರು ಪ್ರತಿಭಟನೆ ನಡೆಸಿದರು.
ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ ರೈತರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಾಹನಗಳನ್ನು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡುವ ಮೂಲಕ ಕಾಮಗಾರಿಯ ಯಾವುದೇ ವಾಹನಗಳು ಓಡಾಡದಂತೆ ತಡೆದರು.
ಪ್ರತಿಭಟನೆಯಲ್ಲಿ ಮೇಡಹಳ್ಳಿ ಸುತ್ತಮುತ್ತಲ ಗ್ರಾಮದ ರೈತರು ಜಮಾವಣೆಗೊಂಡರು. ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರು ರೈತರೊಂದಿಗೆ ಚರ್ಚೆ ನಡೆಸುವಾಗ ಕೆಳಸೇತುವೆ ನಿರ್ಮಿಸುವುದು ತಾಂತ್ರಿಕವಾಗಿ ಕಷ್ಟವಿದೆ ಎಂದಾಗ ರೈತರು ಆಕ್ರೋಶಗೊಂಡು ಬೃಹತ್ ಯಂತ್ರದ ಮೂಲಕ ತಮ್ಮ ಗ್ರಾಮದ ಸಂಪರ್ಕ ರಸ್ತೆ ಅಗೆಯಲು ಪ್ರಾರಂಭಿಸಿದರು. ತಕ್ಷಣ ಅತ್ತಿಬೆಲೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ರೈತರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಮಾಡಿದರು. ಅತ್ತಿಬೆಲೆ ಪೊಲೀಸ್ ಇನ್‌ಸ್ಪೆಕ್ಟರ್ ರಾಘವಗೌಡ ಅವರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ರಾಷ್ಟ್ರೀಯ ಹೆದ್ದಾರಿ 844ರ ಯೋಜನಾ ನಿರ್ದೇಶಕ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಪ್ರಗತಿಪರ ರೈತ ಮುರುಗೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣಕ್ಕಾಗಿ ಮೇಡಹಳ್ಳಿಯಿಂದ ನೂರಾರು ಲೋಡ್ ಮಣ್ಣು ಹೋಗಿದೆ. ಆದರೆ, ಮೇಡಹಳ್ಳಿಯ ಸಂಪರ್ಕ ರಸ್ತೆಯನ್ನು ನಿಗದಿಪಡಿಸಿ ಎಂದಾಗ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಾರೆ. ಎಂ.ಮೇಡಹಳ್ಳಿ ಮತ್ತು ಮಾಯಸಂದ್ರ, ಅತ್ತಿಬೆಲೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ನೆಪದಲ್ಲಿ ಮುಚ್ಚಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ರೈತರಿಗೆ ಕಷ್ಟವಾಗಿದೆ. ಸರ್ವಿಸ್ ರಸ್ತೆಯಲ್ಲಿ ರೈತರು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಪ್ರಗತಿ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಡಹಳ್ಳಿ ಗ್ರಾಮದ ಸಂಪರ್ಕ ರಸ್ತೆಯಲ್ಲಿ ಈ ಹಿಂದಿನ ನಕ್ಷೆಯಂತೆ ಕೆಳಸೇತುವೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಯಲ್ಲಪ್ಪ ಮಾತನಾಡಿ, ಗ್ರಾಮಸ್ಥರು ಒಪ್ಪಿಗೆ ಪಡೆಯದೆ ಗ್ರಾಮದ ಸಂಪರ್ಕ ರಸ್ತೆ ಮುಚ್ಚಲಾಗಿದೆ. ಗ್ರಾಮಗಳ ಸಂಪರ್ಕಕ್ಕೆ ಅಗತ್ಯ ಸೌಲಭ್ಯ ನೀಡಬೇಕಾದುದ್ದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಏಕಾಏಕಿ ರಸ್ತೆ ನಿರ್ಮಿಸಿರುವುದರಿಂದ ರೈತರಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಮೇಡಹಳ್ಳಿ, ಹಳೇಹಳ್ಳಿ, ರಾಚಮಾನಹಳ್ಳಿ, ಬೆಸ್ತಮಾನಹಳ್ಳಿ ಗ್ರಾಮಗಳಿಗೆ ಇದು ಸಂಪರ್ಕ ರಸ್ತೆಯಾಗಿದೆ ಎಂದರು.
ಪಟಾಪಟ್ ನಾಗರಾಜ್, ಹರೀಶ್, ಜಯಕುಮಾರ್, ರಮೇಶ್, ಪಿಳ್ಳಪ್ಪ, ಸುರೇಂದ್ರ, ಸುರೇಶ್, ಕೃಷ್ಣಪ್ಪ, ನಾರಾಯಣಪ್ಪ, ವೆಂಕಟಸ್ವಾಮಿ ಇತರರು ಇದ್ದರು.
ಪರ್ಯಾಯ ಮಾರ್ಗ ಸೂಚಿಸಿ:
ಮೇಡಹಳ್ಳಿಯಿಂದ ಮಾಯಸಂದ್ರದ ಪಶುವೈದ್ಯಕೀಯ ಆಸ್ಪತ್ರೆಗೆ ಓಡಾಡಲು ರಸ್ತೆ ಬಿಟ್ಟಿಲ್ಲ. ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡ ನಂತರ ನೂರಾರು ವಾಹನಗಳು ಓಡಾಡುತ್ತವೆ. ಆಗ ಜಾನುವಾರುಗಳನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಲಾಖೆಯು ಪರ್ಯಾಯ ಮಾರ್ಗವನ್ನು ನೀಡಬೇಕು ಮತ್ತು ಕೆಳಸೇತುವೆ ನಿರ್ಮಿಸಬೇಕು. ಪಿಳ್ಳಪ್ಪ, ಮೇಡಹಳ್ಳಿ ರೈತ
ರೈತರ ಮಾತಿಗೆ ಬೆಲೆಯೇ ಇಲ್ವಾ ಸಂಪರ್ಕ ರಸ್ತೆಗೆ ಆಗ್ರಹಿಸಿ ಮೂರು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೆ, ರೈತರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಕೃಷ್ಣಗಿರಿಯ ಕೇಂದ್ರ ಕಚೇರಿಗೂ ಸಹ ಮನವಿ ಪತ್ರ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 844ರಲ್ಲಿ ಮೇಡಹಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆ ನೀಡಬೇಕು. ಇಲ್ಲವಾದಲ್ಲಿ ನಮ್ಮ ರಸ್ತೆಯನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ.ಮುರುಗೇಶ್, ಪ್ರಗತಿಪರ ರೈತ, ಮೇಡಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.