
ದೇವನಹಳ್ಳಿ: ಗ್ರಾಮೀಣ ಭಾರತವನ್ನು ಜೀವಂತವಾಗಿ ಹಿಡಿದಿಟ್ಟಿದ್ದ ಮನರೇಗಾವನ್ನು ಹಂತಹಂತವಾಗಿ ದುರ್ಬಲಗೊಳಿಸುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಬಡವರ ಬದುಕಿನ ನೆಲೆ ಕಿತ್ತುಕೊಳ್ಳುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಅಧ್ಯಕ್ಷ ಡಾ. ಅಶೋಕ್ ದಾವಳೆ ಆರೋಪಿಸಿದರು.
ಬುಧವಾರ ನಡೆದ ಅಖಿಲ ಭಾರತ ಕಿಸಾನ್ ಸಭಾ ಮತ್ತು ಪ್ರಾಂತ್ಯ ರೈತ ಸಂಘಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮನರೇಗಾ ಕೇವಲ ಉದ್ಯೋಗ ಯೋಜನೆ ಅಲ್ಲ; ಅದು ಗ್ರಾಮೀಣ ಆರ್ಥಿಕತೆಯ ಆಧಾರಸ್ತಂಭ. ಆದರೆ 100 ದಿನಗಳ ಉದ್ಯೋಗ ಖಾತ್ರಿ, ಕನಿಷ್ಠ ಕೂಲಿ, ಸಮಯಕ್ಕೆ ಪಾವತಿ ಮೊದಲಾದ ಮೂಲ ಅಂಶಗಳನ್ನು ಕಡಿತಗೊಳಿಸಿ, ಕಾಯ್ದೆಯ ಆತ್ಮವನ್ನೇ ಕೊಲ್ಲಲಾಗುತ್ತಿದೆ ಎಂದು ಆರೋಪಿಸಿದರು.
ನರೇಗಾ ದುರ್ಬಲವಾದರೆ ಕೃಷಿ ಕೂಲಿ ಕಾರ್ಮಿಕರು ಮಾತ್ರವಲ್ಲ, ಸಣ್ಣ ರೈತರು, ಮಹಿಳೆಯರು, ದಲಿತರು, ಆದಿವಾಸಿಗಳು ಎಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಅನುದಾನ ಕಡಿತ, ಕೆಲಸದ ದಿನಗಳ ತಡೆ, ಆನ್‌ಲೈನ್ ಪಾವತಿ ಸಮಸ್ಯೆಗಳು ಕಾರ್ಮಿಕರನ್ನು ಮತ್ತೆ ಸಾಲದ ಕುಣಿಕೆಗೆ ತಳ್ಳುತ್ತಿವೆ. ‘ಇದು ಬಡವರ ವಿರುದ್ಧದ ಮೌನ ಯುದ್ಧ’ ಎಂದು ವ್ಯಾಖ್ಯಾನಿಸಿದರು.
ವಿದ್ಯುತ್ ಖಾಸಗೀಕರಣದ ಅಂತಿಮ ಗುರಿ ಲಾಭ. ಆದರೆ ಅದರ ಬೆಲೆ ರೈತರು ಮತ್ತು ಬಡವರು ಕಟ್ಟಬೇಕಾಗಿದೆ. ಈ ಹಿಂದೆ ಇದ್ದ ದರಕ್ಕಿಂತ ಈಗ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳು, ಗೃಹ ಬಳಕೆಯ ವಿದ್ಯುತ್ ಮೇಲೆ ಇದರ ಭಾರೀ ಪರಿಣಾಮ ಬೀರುತ್ತಿದೆ. ಕಾರ್ಪೊರೇಟ್ ಕಂಪನಿಗಳ ಲಾಭಕ್ಕಾಗಿ ಜನಸಾಮಾನ್ಯರ ಬದುಕನ್ನು ಬಲಿಕೊಡಲಾಗುತ್ತಿದೆ ಎಂದು ದೂರಿದರು.
ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅನುಸರಿಸಿದ ತೆರಿಗೆ ಮತ್ತು ವ್ಯಾಪಾರ ನೀತಿಗಳು ಜಾಗತಿಕ ಮಾರುಕಟ್ಟೆಯನ್ನು ಅಸ್ಥಿರಗೊಳಿಸಿವೆ. ಭಾರತೀಯ ಕೃಷಿ ಉತ್ಪನ್ನಗಳ ಮೇಲೆ ಆಮದು ಶುಲ್ಕ ಹೆಚ್ಚಿಸಿ ರೈತರ ಮೇಲೆ ಭಾರ ಹಾಕಲಾಗುತ್ತಿದೆ. ಅದೇ ವೇಳೆ ಅಮೆರಿಕದ ವಸ್ತುಗಳಿಗೆ ಭಾರತ ಮಾರುಕಟ್ಟೆಯಲ್ಲಿ ರಿಯಾಯಿತಿ ನೀಡುವಂತೆ ಒತ್ತಡ ಬರುತ್ತಿದೆ. ಇದು ನೇರವಾಗಿ ದೇಶದ ಆಹಾರ ಭದ್ರತೆ ಮತ್ತು ರೈತರ ಬದುಕಿನ ಮೇಲೆ ಹೊಡೆತ ನೀಡುತ್ತದೆ ಎಂದರು.
ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜು ಕೃಷ್ಣನ್, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿತು. ಆದರೆ 11 ವರ್ಷಗಳ ನಂತರ ನಾವು ನೋಡುತ್ತಿರುವುದು ಹೆಚ್ಚುತ್ತಿರುವ ರೈತ ಆತ್ಮಹತ್ಯೆಗಳು, ಗ್ರಾಮೀಣ ವಲಸೆ ಮತ್ತು ಸಾಲದ ಬಿಕ್ಕಟ್ಟು' ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ರಾಜ್ಯ ಸಮಿತಿ ಸದಸ್ಯ ಚಂದ್ರ ತೇಜಸ್ವಿ, ಹಿರಿಯ ಮುಖಂಡ ಪ್ರಭಾ ಬೆಳವಂಗಲ, ರಾಜ್ಯ ಸಹ ಕಾರ್ಯದರ್ಶಿ ಭರತ್ ರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.