ADVERTISEMENT

ದೊಡ್ಡಬಳ್ಳಾಪುರ: ಸತತ ಮಳೆ, ಗಾಳಿಗೆ ನೆಲಕಚ್ಚಿದ ರಾಗಿ ಬೆಳೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 4:51 IST
Last Updated 22 ಅಕ್ಟೋಬರ್ 2025, 4:51 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ನೆಲಕ್ಕೆ ಮಲಗಿರುವ ರಾಗಿ ಹೊಲ
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ನೆಲಕ್ಕೆ ಮಲಗಿರುವ ರಾಗಿ ಹೊಲ   

ದೊಡ್ಡಬಳ್ಳಾಪುರ: ತಾಲ್ಲೂಕಿನಾಧ್ಯಂತ ಒಂದು ವಾರದಿಂದಲೂ ಸುರಿದ ಮಳೆಗೆ ರಾಗಿ ಬೆಳೆ ನೆಲಕಚ್ಚಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ರಾಗಿ, ಜೋಳ ಮತ್ತಿತರ ಬೆಳೆಗಳಿಗೆ ಮಳೆ ಕೊರತೆ ಅನುಭಮಿಸುತ್ತಿದ್ದ ರೈತರ ಪಾಲಿಗೆ ಇದೀಗ ಸುರಿಯುತ್ತಿರುವ ಮಳೆ ಸಹ ಬೆಳೆ ನಷ್ಟದ ಭೀತಿ ಮೂಡಿಸಿದೆ.

ತಾಲ್ಲೂಕಿನಲ್ಲಿ 54,730 ಎಕರೆ ರಾಗಿ ಬಿತ್ತನೆ ಮಾಡಲಾಗಿದೆ. ರಾಜ್ಯ ಸರ್ಕಾರ ರಾಗಿ ಖರೀದಿಗೆ ಬೆಂಬಲ ಹೆಚ್ಚಿಸಿರುವ ಕಾರಣ ಕಳೆದ ವರ್ಷಕ್ಕಿಂತ ಹಚ್ಚಿನ ಬಿತ್ತನೆ ಮಾಡಲಾಗಿದೆ. ಈಗ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಹೊಲಗಳು ಮಲಗಿದ್ದು, ಸಾಲ ಮಾಡಿ ರಾಗಿ ಬೆಳೆ ಮಾಡಿದ್ದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ADVERTISEMENT

ಪ್ರಸ್ತುತ ಕಾಳು ಕಟ್ಟುತ್ತಿರುವ ಹಂತದಲ್ಲಿರುವ ರಾಗಿ ಬೆಳೆ ತೂಕ ಹಾಗೂ ತೇವಾಂಶ ಹೆಚ್ಚಾಗಿರುವ ಕಾರಣ ನೆಲಕ್ಕುರುಳಿದೆ. ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಹಾಕಿದ ಬಂಡವಾಳ ಕೈಗೆ ಬರುತ್ತದೋ ಇಲ್ಲವೋ ಎನ್ನುವ ಅತಂಕ ಕಾಡಲಾರಂಭಿಸಿದೆ. ರಾಗಿ ಹೊಲ ನೆಲಕ್ಕೆ ಮಲಗಿದರೆ ಮಣ್ಣಾಗಿ ಮೇವಿನ ಕೊರತೆಯೂ ಎದುರಾಗಲಿದೆ.

ತಾಲ್ಲೂಕಿನಲ್ಲಿ ಮಳೆಯಿಂದ ರಾಗಿ ನೆಲಕಚ್ಚಿರುವ ಕಾರಣ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟಕ್ಕೆ ಒಳಗಾಗುವ ರೈತರಿಗೆ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಈಗಾಗಲೇ ಅನೇಕ ರೈತರು ಫಸಲ್ ವಿಮೆ ಯೋಜನೆಯಡಿ ಹಣ ಕಟ್ಟಿದ್ದು, ಕೇವಲ ವಿಮೆ ಹಣ ಪಡೆಯಲು ಸೀಮಿತವಾಗದೆ ವಿಮಾ ಸಂಸ್ಥೆಯಿಂದ ಕೃಷಿ ಇಲಾಖೆ ಅಧಿಕಾರಿಗಳು ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.