ADVERTISEMENT

ಗಣಿ ಪರಿಶೀಲನೆ: ಅಧಿಕಾರಿಗಳಿಗೆ ತರಾಟೆ

ನಿಯಮ ಪಾಲನೆಯಾಗುತ್ತಿಲ್ಲ l ತೈಲಗೆರೆ ಸುತ್ತಲಿನ ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:50 IST
Last Updated 24 ಫೆಬ್ರುವರಿ 2021, 3:50 IST
ಗಣಿಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು
ಗಣಿಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು   

ದೇವನಹಳ್ಳಿ: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಬಳಿಯ ಹಿರೇನಾಗವಲ್ಲಿ ಬಳಿ ಸಂಭವಿಸಿರುವ ಕಲ್ಲುಗಣಿಕಾರಿಕೆ ಸ್ಫೋಟದ ಘಟನೆಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿನ ಕಲ್ಲು ಗಣಿ ಪರಿಶೀಲನೆಗೆ ದೌಡಾಯಿಸಿ ಬಂದಾಗ ಸ್ಥಳೀಯ ರೈತರು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತೈಲಗೆರೆ ಸ.ನಂ110ರಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಳಿ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ಮುದ್ದನಾಯಕನಹಳ್ಳಿ, ಸೊಣ್ಣೆನಹಳ್ಳಿ, ಮಿಸಗಾನಹಳ್ಳಿ, ತೈಲಗೆರೆ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಆರ್.ಟಿ.ಐ.ಕಾರ್ಯಕರ್ತ ಚಿಕ್ಕೆಗೌಡ ಮಾತನಾಡಿ, ಗಣಿಯಲ್ಲಿ ಸ್ಫೋಟಕವಿಲ್ಲದೆ ಕಲ್ಲುಗಳು ಹೊರಗೆ ಬರಲು ಸಾಧ್ಯವಿಲ್ಲ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಗಣಿಕಾರಿಕೆಯಲ್ಲಿ ಯಾವ ರೀತಿ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ರಶ್ಮಿ ಅವರನ್ನು ಪ್ರಶ್ನಿಸಿದರು. ವಾಸ್ತವವಾಗಿ ಇಲ್ಲಿ ನಡೆಯುತ್ತಿರುವುದು 50 ರಿಂದ 60 ಎಕರೆಯಲ್ಲಿ ಗಣಿಗಾರಿಕೆ. ನಿಯಮ ಪಾಲನೆಯಾಗುತ್ತಿಲ್ಲ. ರಾಸಾಯನಿಕ ಸ್ಫೋಟಕಗಳು ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ ಎಂಬುದು ಪ‍ರಿಶೀಲನೆ ನಡೆದಿಲ್ಲ. ಎಷ್ಟೋ ಮಂದಿ ಅಮಾಯಕರ ಜೀವ ತೆತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಡಿವೈಎಸ್ ಪಿ ರಂಗಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರಸ್ತುತ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವಂತೆ ಸಮಾಧಾನಪಡಿಸಲು ಯತ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಿಕ್ಕೇಗೌಡ, ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ರಕ್ಷಕರೆ ಭಕ್ಷಕರ ಬೆಂಬಲಕ್ಕೆ ನಿಂತರೆ ಅಮಾಯಕ ರೈತರು ಎಲ್ಲಿಗೆ ಹೋಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ರೈತರಾದ ರಮೇಶ್, ರವಿಕುಮಾರ್, ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಗಣಿ ಆಳ 250 ಅಡಿಗಿಂತ ಕೆಳಗಿದೆ. ಗಣಿಯಲ್ಲಿ ಶೇಖರಣೆಯಾಗುವ ಅಂತರ್ಜಲವನ್ನು ಡೀಸೆಲ್ ಪಂಪ್ ಮೋಟರ್ ನಿಂದ ಹೊರಹಾಕಲಾಗುತ್ತದೆ. ಈ ಗಣಿಗಾರಿಕೆ ವ್ಯಾಪ್ತಿಯ 10 ಕಿ.ಮಿಸುತ್ತ ಯಾವುದೇ ಕೃಷಿ ಮತ್ತು ತೋಟಗಾರಿಕೆ ಬೆಳೆ ರೈತರಿಗೆ ಸಿಗುತ್ತಿಲ್ಲ. ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿಯೂ ಕಲ್ಲಿನ ದೂಳು ಬೀಳುತ್ತಿದೆ. ಪರಿಸರಕ್ಕೂ ಮಾರಕವಾಗಿದೆ. ಅಸಹಾಯಕತೆ ವ್ಯಕ್ತಪಡಿಸಿದರು.

ಉಪವಿಭಾಗಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಅನಿಲ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.